ಕೋಲ್ಕತಾ:ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಈ ಗೆಲುವಿನ ಮೂಲಕ ನಾಯಕ ರೋಹಿತ್ ಶರ್ಮಾ ಸತತ ಮೂರನೇ ಸರಣಿ ತನ್ನದಾಗಿಸಿಕೊಂಡಿದ್ದಾರೆ.
ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಪೊಲಾರ್ಡ್ ಆತಿಥೇಯರನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಘಾತ ಕಂಡಿತು. ಆದರೂ ಸಹ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಮನಮೋಹಕ ಅರ್ಧಶತಕದಿಂದ ಚೇತರಿಸಿಕೊಂಡಿತು.
ಓದಿ:Watch.. ಮಳೆ ಬೆಳೆ ಸಂಪಾಯಿತಲೆ ಪರಾಕ್: ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು
ಇನ್ನಿಂಗ್ಸ್ ಮಧ್ಯದಲ್ಲಿ ಕೆಲ ವಿಕೆಟ್‌ಗಳನ್ನು ಕೈಚೆಲ್ಲಿದ ಭಾರತ ತಂಡ ಒತ್ತಡಕ್ಕೆ ಸಿಲುಕಿತು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ 28 ಎಸೆತಗಳಲ್ಲಿ ಅಜೇಯ 52 ರನ್ ಗಳಿಸುವ ಮೂಲಕ ತಂಡಕ್ಕೆ ದೊಡ್ಡ ಮೊತ್ತ ತಂದುಕೊಟ್ಟರು.
ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಬಿರುಸಿನ ಬ್ಯಾಟಿಂಗ್ ನಡೆಸಿ 18 ಎಸೆತಗಳಲ್ಲಿ 33 ರನ್‌ಗಳ ಕೊಡುಗೆ ಕೊಟ್ಟ ಪರಿಣಾಮ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 186 ರನ್‌ಗಳನ್ನು ಕಲೆಹಾಕಿತು. ವಿಂಡೀಸ್ ಪರ ರಾಸ್ಟನ್ ಚೇಸ್ 3 ವಿಕೆಟ್‌ಗಳನ್ನು ಕಿತ್ತು ಗಮನ ಸೆಳೆದರು.
ಓದಿ:ತಿರುಮಲದಲ್ಲಿ ಗೋವಿಂದಾನಂದ ಯಾತ್ರೆಗೆ ಪೊಲೀಸರ ಅಡ್ಡಿ.. ಹನುಮ ಜನ್ಮಭೂಮಿ ವಿವಾದ ಮತ್ತಷ್ಟು ಜಟಿಲ
ಭಾರತ ನೀಡಿದ ಮೊತ್ತವನ್ನು ಬೆನ್ನಟ್ಟಿದ್ದ ವೆಸ್ಟ್ಇಂಡೀಸ್ ತಂಡ ಆರಂಭದಿಂದಲೇ ಬಿರುಸಿನ ಆಟ ಪ್ರದರ್ಶಿಸಿತು. ಆದರೆ ಕೊನೆಯಲ್ಲಿ ಭಾರತ ನೀಡಿದ ಗುರಿಯನ್ನು ತಲುಪುವಲ್ಲಿ ವಿಫಲವಾಯಿತು. ನಿಗದಿತ 20 ಓವರ್ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು 178 ರನ್‌ಗಳನ್ನು ಮಾತ್ರ ಕಲೆ ಹಾಕಿತು. ಈ ಮೂಲಕ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ 8 ರನ್‌ಗಳ ಸೋಲು ಕಂಡಿತು. ಭಾರತ ಪರ ಭುವನೇಶ್ವರ್ ಕುಮಾರ್, ಚಹಾಲ್ ಮತ್ತು ರವಿ ತಲಾ ಒಂದೊಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.