ನ್ಯೂಜಿಲ್ಯಾಂಡ್:ಸ್ಟಾರ್ ಆಟಗಾರ್ತಿಯರಾದ ಸ್ಮೃತಿ ಮಂಧಾನಾ, ಹರ್ಮನ್ಪ್ರೀತ್ ಕೌರ್, ನಾಯಕಿ ಮಿಥಾಲಿ ರಾಜ್ರ ಹೋರಾಟದ ಫಲವಾಗಿ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ನಡೆದ 5ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದರು. ಈ ಮೂಲಕ ಏಕದಿನ ಸರಣಿ 4-1 ರಲ್ಲಿ ಕೊನೆಗೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ವನಿತೆಯರು ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದ್ದರು. ಆತಿಥೇಯರ ಪರ ಮತ್ತೆ ಮಿಂಚಿದ ಅಮೇಲಿಯಾ ಕೆರ್(66) ಮತ್ತೊಂದು ಅರ್ಧಶತಕ ಸಿಡಿಸಿದರು. ಎಸ್.ಡೆವೈನ್(34) ಲೌರೆನ್ ಡೌನ್(30), ಜೆನ್ಸೆನ್(30) ರನ್ ಗಳಿಸಿ ಭಾರತೀಯ ಬೌಲರ್ಗಳಿಗೆ ಅಲ್ಪ ಪ್ರತಿರೋಧ ಒಡ್ಡಿದರು. ಉಳಿದಂತೆ ಎಲ್ಲಾ ಆಟಗಾರ್ತಿಯರು ಅಲ್ಪ ಮೊತ್ತದಲ್ಲೇ ಔಟಾದರು.
ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ಭಾರತದ ವನಿತೆಯರು ನ್ಯೂಜಿಲ್ಯಾಂಡ್ ತಂಡ ಬೃಹತ್ ಮೊತ್ತ ಪೇರಿಸದಂತೆ ತಡೆ ಒಡ್ಡಿದರು. ಗಾಯಕ್ವಾಡ್ ಮತ್ತು ದೀಪ್ತಿ ಶರ್ಮಾ ತಮ್ಮ ಕೋಟಾದ 10 ಓವರ್ ಎಸೆದು ತಲಾ 2 ವಿಕೆಟ್ ಪಡೆದರೆ, ಸ್ನೇಹ್ ರಾಣಾ 2, ಪೂನಮ್ ಯಾದವ್, ಮೇಘನಾ ಸಿಂಗ್ ತಲಾ 1 ವಿಕೆಟ್ ಪಡೆದರು.