ಮುಂಬೈ (ಮಹಾರಾಷ್ಟ್ರ):ಶ್ರೇಯಾಂಕ ಪಾಟೀಲ್ ಮತ್ತು ಸೈಕಾ ಇಶಾಕ್ ಅವರ ಬೌಲಿಂಗ್ ದಾಳಿಗೆ ನಲುಗಿದ ಆಂಗ್ಲರ ಬ್ಯಾಟಿಂಗ್ ಪಡೆ 20 ಓವರ್ಗೆ ತನ್ನಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 126 ರನ್ ಗಳಿಸಿತು. ಶ್ರೇಯಾಂಕ ಮತ್ತು ಇಶಾಕ್ 3 ವಿಕೆಟ್ ಪಡೆದರೆ, ಅಮಂಜೋತ್ ಕೌರ್ ಮತ್ತು ರೇಣುಕಾ ಠಾಕೂರ್ ಸಿಂಗ್ ತಲಾ ಎರಡು ವಿಕೆಟ್ ಪಡೆದು ಕಾಡಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಆಂಗ್ಲರು ಭಾರತದ ಬಿಗಿ ಬೌಲಿಂಗ್ ದಾಳಿಯಿಂದ ಬಿರುಸಿನ ಬ್ಯಾಟಿಂಗ್ ಮಾಡುವಲ್ಲಿ ಎಡವಿದರು. ತಂಡ 1 ರನ್ ಗಳಿಸುತ್ತಿದ್ದಂತೆ ಮೊದಲ ವಿಕೆಟ್ ಕಳೆದುಕೊಂಡಿತು. ಮೊದಲ ಓವರ್ನಲ್ಲೇ ರೇಣುಕಾ ಠಾಕೂರ್ ಸಿಂಗ್ ಎದುರಾಳಿ ತಂಡಕ್ಕೆ ಒತ್ತಡ ಹೇರಿದರು.
3ನೇ ಓವರ್ನಲ್ಲಿ ರೇಣುಕಾ ಸೋಫಿಯಾ ಡಂಕ್ಲಿ ವಿಕೆಟ್ ಕಬಳಿಸಿ ಆಂಗ್ಲರಿಗೆ ಮತ್ತೊಂದು ಶಾಕ್ ನೀಡಿದರು. 6ನೇ ಓವರ್ನಲ್ಲಿ ಸೈಕಾ ಇಶಾಕ್ ಕಳೆದ ಪಂದ್ಯದಲ್ಲಿ ಮಿಂಚಿದ ಆಲಿಸ್ ಕ್ಯಾಪ್ಸಿ ಅವರ ವಿಕೆಟ್ ಪಡೆದರು. ಆಮಿ ಜೋನ್ಸ್ ನಾಯಕಿಯ ಜೊತೆಗೆ ಸ್ವಲ್ಪ ಹೊತ್ತಿನ ಜೊತೆಯಾಟವನ್ನು ಆಡಿದರು. 25 ರನ್ ಗಳಿಸಿ ಆಡುತ್ತಿದ್ದ ಆಮಿ ಅವರನ್ನು ಸೈಕಾ ಇಶಾಕ್ ಪೆವಿಲಿಯನ್ಗೆ ಅಟ್ಟಿದರು.
ನಾಯಕಿಯ ಏಕಾಂಗಿ ಆಟ:ಆಂಗ್ಲರ ಪಡೆಯ ನಾಯಕಿ ಹೀದರ್ ನೈಟ್ ಒಂದೆಡೆ ವಿಕೆಟ್ ಪತನವಾಗುತ್ತಿದ್ದರೂ ಅರ್ಧಶತಕದ ಇನ್ನಿಂಗ್ಸ್ ಆಡಿದರು. 5 ರಿಂದ 8ನೇ ವಿಕೆಟ್ಗೆ ಹೀದರ್ಗೆ ಯಾವುದೇ ಜೊತೆಯಾಟ ಸಿಗಲಿಲ್ಲ. ಡೇನಿಯಲ್ ಗಿಬ್ಸನ್ (0), ಬೆಸ್ ಹೀತ್ (1), ಫ್ರೇಯಾ ಕೆಂಪ್ (0), ಸೋಫಿ ಎಕ್ಲೆಸ್ಟೋನ್ (2) ಬೇಗ ವಿಕೆಟ್ ಕೊಟ್ಟರು. ಆದರೂ ನಾಯಕಿ ಹೀದರ್ ನೈಟ್ 42 ಬಾಲ್ ಎದುರಿಸಿ 3 ಬೌಂಡರಿ, 3 ಸಿಕ್ಸ್ನಿಂದ 52 ರನ್ ಗಳಿಸಿದರು.