ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್‌ ವಿರುದ್ಧ 2ನೇ ಟಿ20: ಸರಣಿ ಜೀವಂತ ಉಳಿಸಿಕೊಳ್ಳುವುದೇ ಹರ್ಮನ್​ಪ್ರೀತ್​ ಪಡೆ?

INDW vs ENGW T20I: ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಜೀವಂತವಾಗಿರಿಸಲು ಶನಿವಾರದ ಪಂದ್ಯ ಗೆಲ್ಲುವುದು ಭಾರತಕ್ಕೆ ನಿರ್ಣಾಯಕ.

India Women vs England Women
India Women vs England Women

By ETV Bharat Karnataka Team

Published : Dec 8, 2023, 9:43 PM IST

ಮುಂಬೈ(ಮಹಾರಾಷ್ಟ್ರ): ಇಂಗ್ಲೆಂಡ್​ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ನಾಳೆ (ಡಿ.9) ನಡೆಯಲಿರುವ ಪಂದ್ಯವನ್ನು ಹರ್ಮನ್​ಪ್ರೀತ್ ಕೌರ್​ ನಾಯಕತ್ವದ ವನಿತೆಯರ ತಂಡ ಗೆಲ್ಲಲೇಬೇಕಿದೆ. ಮೊದಲ ಪಂದ್ಯದಲ್ಲಿ ಧಾರಾಳವಾಗಿ ರನ್​ ಬಿಟ್ಟುಕೊಟ್ಟು ಮತ್ತು ಕ್ಷೇತ್ರರಕ್ಷಣೆಯಲ್ಲಾದ ಎಡವಟ್ಟುಗಳನ್ನು ತಿದ್ದಿಕೊಂಡು ಜಯದ ಲಯಕ್ಕೆ ಮರಳಲೇಬೇಕಿದೆ.

ಮುಂಬೈನ ವಾಂಖೆಡೆಯಲ್ಲಿ ನಡೆದ ಮೊದಲ ಟಿ20ಯಲ್ಲಿ ಅಬ್ಬರದ ಬ್ಯಾಟಿಂಗ್​ ಮಾಡಿದ ಆಂಗ್ಲ ವನಿತೆಯರು 198 ರನ್​ಗಳ ಬೃಹತ್​ ಗುರಿ ನೀಡಿದ್ದರು. ಇದನ್ನು ಬೆನ್ನತ್ತಿದ ಭಾರತ 38 ರನ್​ಗಳ ಅಂತರದಿಂದ ಸೋಲನುಭವಿಸಿತ್ತು. ಭಾರತದ ವಿರುದ್ಧ ಇಂಗ್ಲೆಂಡ್​ ಆಡಿದ 28 ಟಿ20 ಪಂದ್ಯಗಳಲ್ಲಿ 21ನೇ ಮತ್ತು ಭಾರತದಲ್ಲೇ ನಡೆದ 10 ಪಂದ್ಯದಲ್ಲಿ ಪಡೆದ 8ನೇ ಗೆಲುವು ಇದಾಗಿದೆ. 1-0ಯ ಮುನ್ನಡೆ ಪಡೆದಿರುವ ಇಂಗ್ಲೆಂಡ್​ ವನಿತೆಯರು ಎರಡನೇ ಪಂದ್ಯ ಗೆದ್ದು ಸರಣಿ ಕೈವಶದ ಚಿಂತನೆಯಲ್ಲಿದ್ದಾರೆ.

ಬೌಲರ್‌ಗಳು ದುಬಾರಿ​:ಇಂಗ್ಲೆಂಡ್​ ಬ್ಯಾಟರ್​ಗಳನ್ನು ಸ್ಪಿನ್​ ಬೌಲಿಂಗ್​ನಿಂದ ಕಟ್ಟಿಹಾಕುವ ಯೋಜನೆ ರೂಪಿಸಿದ್ದ ಹರ್ಮನ್​​ಪ್ರೀತ್​ ಲೆಕ್ಕಾಚಾರ ಮೊದಲ ಪಂದ್ಯದಲ್ಲಿ ಬುಡಮೇಲಾಗಿತ್ತು. ಪಾದಾರ್ಪಣೆ ಪಂದ್ಯವನ್ನಾಡುತ್ತಿದ್ದ ಶ್ರೇಯಾಂಕಾ ಪಾಟೀಲ್ (2/44) ಮತ್ತು ಸೈಕಾ ಇಶಾಕ್ (1/38) ದುಬಾರಿಯಾಗಿದ್ದರು. ಡ್ಯಾನಿ ವ್ಯಾಟ್, ನ್ಯಾಟ್ ಸ್ಕಿವರ್ ಬ್ರಂಟ್ ವೇಗದ ಅರ್ಧಶತಕ ಮತ್ತು ಆಮಿ ಜೋನ್ಸ್ ಉತ್ತಮ ಇನ್ನಿಂಗ್ಸ್​ ಆಡಿದ್ದರು. ಇವರನ್ನು ಕಟ್ಟಿಹಾಕಲು ಭಾರತದ ಬೌಲರ್​ಗಳಿಗೆ ಸಾಧ್ಯವಾಗಲಿಲ್ಲ. ನಾಳಿನ ಪಂದ್ಯದಲ್ಲಿ ಈ ಮೂವರ ಜೊತೆಗೆ ಇತರೆ ಆಟಗಾರ್ತಿಯರು ಅಬ್ಬರಿಸದಂತೆ ನಿಯಂತ್ರಿಸಬೇಕಿದೆ.

ಜೊತೆಯಾಟದ ಕೊರತೆ: ಭಾರತಕ್ಕೆ ಚೇಸಿಂಗ್​ನಲ್ಲಿ ಜೊತೆಯಾಟದ ಕೊರತೆ ಆಗಿತ್ತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅರ್ಧಶತಕದ ಇನ್ನಿಂಗ್ಸ್​ ಆಡಿದ್ದರು. ಆದರೆ ಅವರೊಂದಿಗೆ ಯಾರೂ ಜೊತೆಯಾಟ ಮಾಡಲಿಲ್ಲ. ಇದು ಬೃಹತ್​ ಗುರಿ ಬೆನ್ನತ್ತುವ ಭಾರತದ ಹಿನ್ನಡೆಗೆ ಕಾರಣವಾಯಿತು. ಇಂಗ್ಲೆಂಡ್​ ವೇಗದ ಬೌಲರ್​ಗಳು ಭಾರತದ ಬ್ಯಾಟರ್​​​ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ಅಬ್ಬರಿಸಬೇಕಿದೆ ಮಂಧಾನ, ಜೆಮಿಮಾ:ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್​ ಅಲ್ಪ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು. ನಾಳಿನ ಪಂದ್ಯದಲ್ಲಿ ಇವರ ಬ್ಯಾಟ್​ನಿಂದ ರನ್​ ಬರಬೇಕಿದೆ. ಮಂಧಾನ ಮತ್ತು ಜೆಮಿಮಾ ಟಿ20 ಮಾದರಿಯಲ್ಲಿ ಬ್ಯಾಟಿಂಗ್​ ಮಾಡುವ ಕ್ಷಮತೆ ಹೊಂದಿದ್ದಾರೆ.

ತಂಡಗಳು ಇಂತಿವೆ- ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ಅಮನ್‌ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಮನ್ನತ್ ಕಶ್ಯಪ್, ಸೈಕಾ ಇಶಾಕ್, ರೇಣುಕಾ ಠಾಕೂರ್ ಸಿಂಗ್, ಟಿಟಾಸ್ ಸಾಧು, ಪೂಜಾ ವಸ್ತ್ರಾಕರ್, ಕನಿಕಾ ಅಹುಜಾ, ಮಿನ್ನು ಮಣಿ.

ಇಂಗ್ಲೆಂಡ್: ಲಾರೆನ್ ಬೆಲ್, ಮಾಯಾ ಬೌಚಿಯರ್, ಆಲಿಸ್ ಕ್ಯಾಪ್ಸೆ, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಮಹಿಕಾ ಗೌರ್, ಡೇನಿಯಲ್ ಗಿಬ್ಸನ್, ಸಾರಾ ಗ್ಲೆನ್, ಬೆಸ್ ಹೀತ್, ಆಮಿ ಜೋನ್ಸ್, ಫ್ರೇಯಾ ಕೆಂಪ್, ಹೀದರ್ ನೈಟ್, ನ್ಯಾಟ್ ಸ್ಕಿವರ್-ಬ್ರಂಟ್, ಡೇನಿಯಲ್ ವ್ಯಾಟ್.

ಇದನ್ನೂ ಓದಿ:ನಾಳೆ ಮಹಿಳಾ ಐಪಿಎಲ್‌​ ಹರಾಜು: 30 ಸ್ಥಾನಕ್ಕೆ 165 ಆಟಗಾರ್ತಿಯರ ಸ್ಪರ್ಧೆ

ABOUT THE AUTHOR

...view details