ಮುಂಬೈ(ಮಹಾರಾಷ್ಟ್ರ): ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ ಮತ್ತು ದೀಪ್ತಿ ಶರ್ಮಾ ಅವರ ಅರ್ಧಶತಕದ ಇನ್ನಿಂಗ್ಸ್ ನೆರವಿನಿಂದ ಭಾರತದ ವನಿತೆಯರ ತಂಡ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 157 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ತಂಡ 376ಕ್ಕೆ 7 ವಿಕೆಟ್ ಕಳೆದುಕೊಂಡಿದ್ದು, ಕ್ರೀಸ್ನಲ್ಲಿ ದೀಪ್ತಿ ಶರ್ಮಾ (70 ರನ್) ಮತ್ತು ಪೂಜಾ ವಸ್ತ್ರಾಕರ್ (33 ರನ್) ಇದ್ದಾರೆ. ಇನ್ನೆರಡು ದಿನಗಳ ಪಂದ್ಯ ಬಾಕಿ ಉಳಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ 77.4 ಓವರ್ಗೆ 219 ರನ್ ಗಳಿಸಿ ಆಲೌಟಾಗಿತ್ತು. ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 19 ಓವರ್ಗೆ 1 ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿತ್ತು. 59 ಎಸೆತಗಳಲ್ಲಿ 40 ರನ್ ಗಳಿಸಿದ ಶೆಫಾಲಿ ವರ್ಮಾ ಔಟ್ ಆಗಿದ್ದರು. ಉಪನಾಯಕಿ ಮಂಧಾನ ಮತ್ತು 'ನೈಟ್ ವಾಚ್ಮೆನ್' ಸ್ನೇಹ ರಾಣಾ ಕ್ರೀಸ್ ಕಾಯ್ದುಕೊಂಡಿದ್ದರು.
ಎರಡನೇ ದಿನದ ಮೊದಲ ಸೆಷನ್ನಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿತು. ನೈಟ್ ವಾಚ್ಮೆನ್ ಆಗಿ ಬಂದಿದ್ದ ರಾಣಾ ಎರಡನೇ ವಿಕೆಟ್ಗೆ 50 ರನ್‌ಗಳ ಪಾಲುದಾರಿಕೆ ಹಂಚಿಕೊಂಡರು. 57 ಎಸೆತ ಆಡಿದ ರಾಣಾ ಕೇವಲ 9 ರನ್ ಗಳಿಸಿದರಾದೂ ವಿಕೆಟ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಅರ್ಧಶತಕ ದಾಖಲಿಸಿದ ಮಂಧಾನ ಶತಕದತ್ತ ದಾಪುಗಾಲಿಡುತ್ತಿರುವಾಗ ರನೌಟ್ಗೆ ಬಲಿಯಾದರು. 106 ಎಸೆತ ಆಡಿದ ಸ್ಮೃತಿ 12 ಬೌಂಡರಿಗಳ ಸಹಾಯದಿಂದ 74 ರನ್ ಕಲೆಹಾಕಿದರು.
ಜೆಮಿಮಾ-ರಿಚಾ ಶತಕದ ಜೊತೆಯಾಟ: 4ನೇ ವಿಕೆಟ್ಗೆ ಒಂದಾದ ಜೆಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ 113 ರನ್‌ಗಳ ಜೊತೆಯಾಟ ಆಡಿದರು. 104 ಎಸೆತ ಆಡಿದ ರಿಚಾ 7 ಬೌಂಡರಿಯ ಸಹಾಯದಿಂದ 52 ರನ್ ಕಲೆಹಾಕಿದರು. ರಿಚಾ ವಿಕೆಟ್ ನಂತರ ಬಂದ ನಾಯಕಿ ಹರ್ಮನ್ಪ್ರೀತ್ ಕೌರ್ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಯಾಸ್ತಿಕ ಭಾಟಿಯಾ ಸಹ ಪೆವಿಲಿಯನ್ಗೆ ಮರಳಿದರು. 121 ಎಸೆತ ಆಡಿ 9 ಬೌಂಡರಿಗಳ ಸಹಾಯದಿಂದ 73 ರನ್ ಗಳಿಸಿದ್ದ ಜೆಮಿಮಾ ರಾಡ್ರಿಗಸ್ ಸಹ ವಿಕೆಟ್ ಕೊಟ್ಟರು. 159ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ 174ಕ್ಕೆ 7 ವಿಕೆಟ್ ನಷ್ಟ ಅನುಭವಿಸಿ ಸಂಕಷ್ಟಕ್ಕೊಳಗಾಯಿತು. 14 ರನ್‌ಗಳ ಅಂತರದಲ್ಲಿ ತಂಡ 4 ವಿಕೆಟ್ ಕಳೆದುಕೊಂಡಿತು.
ದೀಪ್ತಿ-ಪೂಜಾ ಆಸರೆ: ಒಮ್ಮೆಗೆ 4 ವಿಕೆಟ್ ಕುಸಿತ ಅನುಭವಿಸಿದ ತಂಡಕ್ಕೆ ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ ಆಸರೆಯಾದರು. ಕೊನೆಯ ಇನ್ನಿಂಗ್ಸ್ನಲ್ಲಿ ಈ ಜೋಡಿ ಶತಕದ ಜೊತೆಯಾಟವಾಡಿದ್ದಲ್ಲದೇ ದಿನದಾಟದ ಅಂತ್ಯದವರೆಗೂ ಅಜೇಯವಾಗಿ ಮುಂದುವರೆದಿದ್ದಾರೆ. 147 ಎಸೆತ ಎದುರಿಸಿರುವ ದೀಪ್ತಿ ಶರ್ಮಾ 9 ಬೌಂಡರಿಯಿಂದ 70 ಮತ್ತು 115 ಎಸೆತ ಆಡಿರುವ ಪೂಜಾ ವಸ್ತ್ರಾಕರ್ 4 ಬೌಂಡರಿಗಳ ಸಹಾಯದಿಂದ 33 ರನ್ ಗಳಿಸಿ ಆಜೇಯವಾಗುಳಿದರು.
ಆಸೀಸ್ ಬೌಲಿಂಗ್ ಅಸ್ತ್ರ: ಭಾರತದ ಬ್ಯಾಟಿಂಗ್ ವಿರುದ್ಧ ಆಸ್ಟ್ರೇಲಿಯಾ ನಾಯಕಿ ಅಲಿಸ್ಸಾ ಹೀಲಿ ಎಂಟು ಜನ ಬೌಲರ್ಗಳನ್ನು ಕಣಕ್ಕಿಳಿಸಿದರು. ಅದರಲ್ಲಿ ಯಶಸ್ಸು ಸಾಧಿಸಿದ್ದು ಆಶ್ಲೀ ಗಾರ್ಡ್ನರ್ ಮಾತ್ರ. 41 ಓವರ್ ಮಾಡಿರುವ ಆಶ್ಲೀ 100 ರನ್ ಕೊಟ್ಟು 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ಬಿಟ್ಟರೆ, ಜೆಸ್ ಜೊನಾಸೆನ್ ಮತ್ತು ಕಿಮ್ ಗಾರ್ತ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:'ಸಂಜು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ದುರಾದೃಷ್ಟವಶಾತ್..': ಕೆ.ಎಲ್.ರಾಹುಲ್