ಮುಂಬೈ (ಮಹಾರಾಷ್ಟ್ರ):ಫೋಬೆ ಲಿಚ್‌ಫೀಲ್ಡ್ ಮತ್ತು ಎಲ್ಲಿಸ್ ಪೆರ್ರಿ ಅವರ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಆತಿಥೇಯ ಭಾರತದ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 258 ರನ್ ಕಲೆ ಹಾಕಿದೆ. ದೀಪ್ತಿ ಶರ್ಮಾ 5 ವಿಕೆಟ್ ಕಬಳಿಸಿ ಉತ್ತಮ ಆರಂಭ ಪಡೆದಿದ್ದ ಆಸೀಸ್ ತಂಡವನ್ನು ಬೃಹತ್ ಮೊತ್ತ ಪೇರಿಸದಂತೆ ನಿಯಂತ್ರಿಸಿದರು.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ವನಿತೆಯರ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ 3 ಏಕದಿನ ಪಂದ್ಯಗಳ ಸರಣಿಯ ಎರನಡೇ ಮ್ಯಾಚ್ ನಡೆಯುತ್ತಿದೆ. ಟಾಸ್ ಗೆದ್ದ ಆಸೀಸ್ ನಾಯಕಿ ಅಲಿಸ್ಸಾ ಹೀಲಿ ಮೊದಲು ಬ್ಯಾಟಿಂಗ್ ನಿರ್ಧಾರ ಮಾಡಿದರು. 13 ರನ್ ಗಳಿಸಿ ನಾಯಕಿ ಹಿಲಿ ಔಟ್ ಆಗಿ ಕಾಂಗರೂ ಪಡೆಗೆ ಉತ್ತಮ ಆರಂಭಿಕ ಜೊತೆಯಾಟ ಸಿಗದಿದ್ದರೂ, ಎರಡನೇ ವಿಕೆಟ್ಗೆ ತಂಡ ಕಮ್ಬ್ಯಾಕ್ ಮಾಡಿತು.
ಫೋಬೆ ಲಿಚ್‌ಫೀಲ್ಡ್ ಮತ್ತು ಎಲ್ಲಿಸ್ ಪೆರ್ರಿ ಎರಡನೇ ವಿಕೆಟ್ಗೆ 77 ರನ್ಗಳ ಪಾಲುದಾರಿಕೆ ಹಂಚಿಕೊಂಡದ್ದಲ್ಲದೇ ವೈಯಕ್ತಿಕ ಅರ್ಧಶತಕವನ್ನು ಪೂರೈಸಿದರು. 47 ಬಾಲ್ ಎದುರಿಸಿದ ಪೆರ್ರಿ 5 ಬೌಂಡರಿ, 1 ಸಿಕ್ಸ್ ನೆರವಿನಿಂದ 50 ರನ್ ಕಲೆಹಾಕಿದರು. ಅವರ ನಂತರ ಬಂದ ಬೆತ್ ಮೂನಿ (10) ಬೇಗ ವಿಕೆಟ್ ಕೈಚೆಲ್ಲಿದರು.
ಚೊಚ್ಚಲ ವಿಕೆಟ್ ಪಡೆದ ಶ್ರೇಯಾಂಕ: ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಶ್ರೇಯಾಂಕ ಪಾಟೀಲ್ ಅರ್ಧಶತಕ ಗಳಿಸಿ ದೊಡ್ಡ ಮೊತ್ತ ಕಲೆಹಾಕುವತ್ತ ಸಾಗುತ್ತಿದ್ದ ಫೋಬೆ ಲಿಚ್‌ಫೀಲ್ಡ್ ಅವರನ್ನು ಔಟ್ ಮಾಡಿದರು. ಈ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ವಿಕೆಟ್ ಸಾಧನೆ ಮಾಡಿದರು. ಇನ್ನಿಂಗ್ಸ್ನಲ್ಲಿ ಫೋಬೆ 98 ಬಾಲ್ ಎದುರಿಸಿ 6 ಬೌಂಡರಿಯಿಂದ 63 ರನ್ ಕಲೆಹಾಕಿದರು.
ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಕುಸಿತ: ಕೆಳ ಕ್ರಮಾಂಕದಲ್ಲಿ ಯಾವುದೇ ಆಟಗಾರ್ತಿಯರು ದೊಡ್ಡ ಮೊತ್ತವನ್ನು ಕಲೆಹಾಕಲಿಲ್ಲ. ದೀಪ್ತಿ ಶರ್ಮಾ ಬ್ಯಾಟರ್ಗಳನ್ನು ಕಾಡಿದರು. ತಹ್ಲಿಯಾ ಮೆಕ್‌ಗ್ರಾತ್ (24), ಆಶ್ಲೀ ಗಾರ್ಡ್ನರ್ (2), ಅನ್ನಾಬೆಲ್ ಸದರ್‌ಲ್ಯಾಂಡ್ (23) ಮತ್ತು ಜಾರ್ಜಿಯಾ ವೇರ್‌ಹ್ಯಾಮ್ (22) ಸಣ್ಣ ಕೊಡುಗೆ ನೀಡಿ ಔಟ್ ಆದರು. ಕೊನೆಯಲ್ಲಿ ಅಲಾನಾ ಕಿಂಗ್ 28 ಮತ್ತು ಕಿಮ್ ಗಾರ್ತ್ 11 ರನ್ ಗಳಿಸಿ ಅಜೇಯವಾಗಿ ಉಳಿದರು.
ಭಾರತದ ಪರ ದೀಪ್ತಿ ಶರ್ಮಾ 10 ಓವರ್ ಮಾಡಿ 38 ರನ್ ಕೊಟ್ಟು 5 ವಿಕೆಟ್ ಪಡೆದರೆ, ಸ್ನೇಹ ರಾಣಾ, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ:ನಿಧಾನ ಗತಿ ಬೌಲಿಂಗ್: ಡಬ್ಲ್ಯುಟಿಸಿ ಅಂಕ ಕಳೆದುಕೊಂಡ ಭಾರತ