ಮುಂಬೈ: ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ-20 ವಿಶ್ವಕಪ್ನಲ್ಲಿ ರನ್ನರ್ ಆಪ್ ಆಗಿರುವ ಭಾರತ ತಂಡದ ವನಿತೆಯರಿಗೆ ಸಲ್ಲಬೇಕಿದ್ದ 5,00,000 ಡಾಲರ್(3.64 ಕೋಟಿ ರೂಪಾಯಿ) ಮೊತ್ತವನ್ನು ಬಿಸಿಸಿಐ ಇನ್ನೂ ನೀಡಿಲ್ಲ ಎಂದು ವರದಿಗಳಿಂದ ತಿಳಿದು ಬಂದಿದೆ.
ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮಹಿಳಾ ತಂಡ 14 ತಿಂಗಳ ಹಿಂದೆ ನಡೆದಿದ್ದ ಚುಟುಕು ವಿಶ್ವಕಪ್ನಲ್ಲಿ ಅಜೇಯ ತಂಡವಾಗಿ ಫೈನಲ್ ತಲುಪಿತ್ತು. ಸುಮಾರು 86 ಸಾವಿರ ಪ್ರೇಕ್ಷಕರ ಮಧ್ಯೆ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿತ್ತು.
ಆದರೆ ಟೆಲಿಗ್ರಾಫ್ ವರದಿಯ ಪ್ರಕಾರ, ಭಾರತ ವನಿತೆಯರ ತಂಡ ರನ್ನರ್ ಅಪ್ ಆಗಿದ್ದಕ್ಕೆ ಬಹುಮಾನ ಮೊತ್ತವಾಗಿ ಬಂದಿರುವ 5 ಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಬಿಸಿಸಿಐ ನೀಡಿಲ್ಲ ಎಂದು ತಿಳಿದು ಬಂದಿದೆ.
ವಿಶ್ವಕಪ್ ವಿಜೇತ ತಂಡಕ್ಕೆ 10 ಲಕ್ಷ ಯುಎಸ್ಡಿ ಮತ್ತು ರನ್ನರ್ ಅಪ್ ತಂಡಕ್ಕೆ 5 ಲಕ್ಷ ಡಾಲರ್ ಮೊತ್ತ ನಿಗದಿಯಾಗಿರುತ್ತದೆ. ಆದರೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಜೀವನ ಬದಲಾಯಿಸುವ ಅಂತಹ ಮೊತ್ತವನ್ನು ಇನ್ನೂ ಆಟಗಾರ್ತಿಯರಿಗೆ ನೀಡದಿರುವುದು ಆಶ್ಚರ್ಯ ತಂದಿದೆ.
ಬಹುಮಾನದ ಹಣವನ್ನು ಭಾರತದ ವಿಶ್ವಕಪ್ ತಂಡದಲ್ಲಿ 15 ಆಟಗಾರ್ತಿಯರಿಗೆ ಸಮನಾಗಿ ಹಂಚಿದರೆ, ಭಾರತೀಯ ಮಹಿಳಾ ಕ್ರಿಕೆಟಿಗರು ತಲಾ 33,000 ಡಾಲರ್(24 ಲಕ್ಷ ರೂ.) ಗಳಿಸುತ್ತಿದ್ದರು.
ಈಗಾಗಲೇ ವಾರ್ಷಿಕ ಗುತ್ತಿಗೆಯಲ್ಲಿ ಮಹಿಳಾ ಕ್ರಿಕೆಟಿಗರಿಗೆ ಮತ್ತು ಪುರುಷ ಕ್ರಿಕೆಟಿಗರ ನಡುವೆ ಬಹಳಷ್ಟು ಅಂತರ ಇರುವುದರಿಂದ ಟೀಕೆಗೆ ಗುರಿಯಾಗಿರುವ ಬಿಸಿಸಿಐ ಈ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಇದನ್ನು ಓದಿ:ನಮ್ಮಿಂದ ಕೊಹ್ಲಿಯನ್ನು ಹಿಂದಿಕ್ಕುವುದು ಅಸಾಧ್ಯ: ವಾರ್ನರ್ ಹೀಗೆ ಹೇಳಿದ್ಯಾಕೆ?