ಮುಂಬೈ:ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ವನಿತೆಯರು ಸೂಪರ್ ಓವರ್ನಲ್ಲಿ ರೋಚಕ ಜಯ ಸಾಧಿಸಿದ್ದಾರೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದ್ದಾರೆ.
ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಬ್ಯಾಟಿಂಗ್ಗಿಳಿದ ಆಸೀಸ್ ತಂಡದ ಮಹಿಳೆಯರು ನಿಗದಿತ 20 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಿದ್ದರು. ಆಸ್ಟ್ರೇಲಿಯಾ ಪರ ಮೂನಿ (82) ಹಾಗೂ ತಾನಿಯಾ ಮೆಗ್ರಾತ್ (70) ಅಜೇಯ ಅರ್ಧಶತಕಗಳ ಮೂಲಕ ಅಬ್ಬರಿಸಿದ್ದರು.
ಬಳಿಕ 188 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸ್ಮೃತಿ ಮಂಧಾನ ಅರ್ಧಶತಕ(79) ನೆರವಿನಿಂದ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿತು. ಶಫಾಲಿ ವರ್ಮಾ 34, ಜೆಮಿಮಾ ರಾಡ್ರಿಗಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ 21 ಹಾಗೂ ರಿಚಾ ಘೋಷ್ ಅಜೇಯ 26 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಅಂತಿಮ ಓವರ್ನಲ್ಲಿ ಭಾರತದ ಗೆಲುವಿಗೆ 14 ರನ್ ಅಗತ್ಯವಿತ್ತು. ಆದರೆ 13 ರನ್ ಮಾತ್ರ ಗಳಿಸಿದ್ದರಿಂದ, 187 ರನ್ಗಳ ಸಮಬಲದಿಂದ ಪಂದ್ಯವು ಟೈ ಆಗಿತ್ತು.
ನಂತರ ಸೂಪರ್ ಓವರ್ ಹಣಾಹಣಿಯಲ್ಲಿ ಭಾರತದ ವನಿತೆಯರು 1 ವಿಕೆಟ್ಗೆ 20 ರನ್ ಚಚ್ಚಿದರು. 21 ರನ್ ಗುರಿ ಬೆನ್ನಟ್ಟಿದ ಆಸೀಸ್ 16 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಹರ್ಮನ್ ಪ್ರೀತ್ ಬಳಗ 5 ರನ್ ಅಂತರದ ಗೆಲುವಿನ ಕೇಕೆ ಹಾಕಿತು.
ಇದನ್ನೂ ಓದಿ:Ind Vs Ban: ಮೊದಲ ಟೆಸ್ಟ್ನಿಂದ ರೋಹಿತ್ ಔಟ್, 12 ವರ್ಷಗಳ ಬಳಿಕ ವೇಗಿ ಉನದ್ಕತ್ ಕಮ್ಬ್ಯಾಕ್