ಪೋರ್ಟ್ ಆಫ್ ಸ್ಪೇನ್(ವೆಸ್ಟ್ ಇಂಡೀಸ್):ಸಂಘಟಿತ ಹೋರಾಟಕ್ಕೆ ಜಯವಿದೆ ಎಂಬುದನ್ನು ಭಾರತ ತಂಡ ಮತ್ತೊಮ್ಮೆ ಸಾಬೀತು ಮಾಡಿದೆ. 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 311/6 ರನ್ಗಳ ಬೃಹತ್ ಮೊತ್ತವನ್ನು ಭಾರತ 49.4 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 312 ರನ್ ಬಾರಿಸುವ ಮೂಲಕ ಸರಣಿ ತನ್ನದಾಗಿಸಿದೆ.
ನಿನ್ನೆ ಪೋರ್ಟ್ ಆಫ್ ಸ್ಪೇನ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಕ್ರೀಡಾಂಗಣದಲ್ಲಿ ರನ್ ಮಳೆಯೇ ಸುರಿದಿದೆ. ಉಭಯ ತಂಡಗಳು 300 ರನ್ ಗಳಿಸಿದ್ದು ಇದಕ್ಕೆ ಸಾಕ್ಷಿ. ಪೂರ್ಣ ಬ್ಯಾಟಿಂಗ್ಗೆ ಪಿಚ್ ಆಗಿದ್ದ ಮೈದಾನದಲ್ಲಿ 22 ಸಿಕ್ಸರ್, 44 ಬೌಂಡರಿಗಳು ದಾಖಲಾದವು.
ತಂಡದ 'ಹೋಪ್' ಹೆಚ್ಚಿಸಿದ 'ಶಾಯ್': ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆರಿಬಿಯನ್ ತಂಡಕ್ಕೆ ಶಾಯ್ ಹೋಪ್ ಮತ್ತು ಕೈಲ್ ಮೇಯರ್ಸ್ ಚುರುಕಿನ ಆರಂಭ ನೀಡಿದರು. ಮೊದಲ ವಿಕೆಟ್ಗೆ 65 ರನ್ ಗಳಿಸಿದರು. ಮೇಯರ್ಸ್ 39 ರನ್ ಗಳಿಸಿ ಔಟಾದರೆ, ಶಾಮಾರ್ಹ್ ಬ್ರೂಕ್ಸ್ 35 ರನ್ ಮಾಡಿದರು. ಬ್ರೆಂಡೆನ್ ಕಿಂಗ್ ಸೊನ್ನೆ ಸುತ್ತಿದರು.
ಮೂರು ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ವೇಳೆ ಮೈದಾನಕ್ಕಿಳಿದ ನಾಯಕ ನಿಕೋಲಸ್ ಪೂರನ್ ಭಾರತೀಯ ಬೌಲರ್ಗಳನ್ನು ದಂಡಿಸಿದರು. ಅದರಲ್ಲೂ ಸ್ಪಿನ್ನರ್ಗಳನ್ನೇ ಟಾರ್ಗೆಟ್ ಮಾಡಿದ ಪೂರನ್ ಸಿಕ್ಸರ್ಗಳಿಂದಲೇ ಸದ್ದು ಮಾಡಿದರು. 77 ಎಸೆತಗಳಲ್ಲಿ 6 ಸಿಕ್ಸರ್, 1 ಬೌಂಡರಿ ಬಾರಿಸಿ 74 ರನ್ ಸಿಡಿಸಿದರು.
ಇನ್ನೊಂದೆಡೆ ತಾಳ್ಮೆಯಿಂದಲೇ ದೊಡ್ಡ ಇನಿಂಗ್ಸ್ ಕಟ್ಟಿದ ಶಾಯ್ ಹೋಪ್ ಭರ್ಜರಿ ಶತಕ ಬಾರಿಸಿದರು. 3 ಸಿಕ್ಸರ್, 8 ಬೌಂಡರಿ ಸಮೇತ 115 ರನ್ ಗಳಿಸಿದರು. ಇದು ಅವರ 100ನೇ ಪಂದ್ಯ ಎಂಬುದು ವಿಶೇಷವಾಗಿತ್ತು. ತಂಡ ನಿಗದಿತ 50 ಓವರ್ಗಳಲ್ಲಿ 311 ರನ್ ಗಳಿಸಿತು. ಶಾರ್ದೂಲ್ ಠಾಕೂರ್ 3 ವಿಕೆಟ್ ಕಿತ್ತರು.
ಭಾರತಕ್ಕೆ ಸಂಘಟಿತ ಗೆಲುವು:311 ರನ್ಗಳ ಬೃಹತ್ ಮೊತ್ತವನ್ನು ಬೆಂಬತ್ತಿದ ಭಾರತ ಸಂಘಟಿತ ಪ್ರದರ್ಶನ ನೀಡಿತು. ಕಳೆದ ಪಂದ್ಯದಲ್ಲಿ ಶತಕ ವಂಚಿತರಾಗಿದ್ದ ನಾಯಕ ಶಿಖರ್ ಧವನ್ 13 ರನ್ ಗಳಿಗೆ ಔಟಾದರು. ಶುಭಮನ್ ಗಿಲ್ 43 ರನ್ ಮಾಡಿದರು. ಸೂರ್ಯಕುಮಾರ್ ಯಾದವ್(9)ಈ ಪಂದ್ಯದಲ್ಲೂ ರನ್ ಗಳಿಸಲಿಲ್ಲ.
ತ್ರಿವಳಿ ಅರ್ಧಶತಕ: ಕಳೆದ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲೂ 63 ಬಾರಿಸಿದರು. ಸಂಜು ಸ್ಯಾಮ್ಸನ್ 54 ರನ್ ಸಿಡಿಸಿದರು. ದೀಪಕ್ ಹೂಡಾ 33 ರನ್ ಮಾಡಿದರು. ರವೀಂದ್ರ ಜಡೇಜಾ ಬದಲಾಗಿ ಅವಕಾಶ ಪಡೆದಿರುವ ಅಕ್ಸರ್ ಪಟೇಲ್ ಚೊಚ್ಚಲ ಅರ್ಧಶತಕ ಸಿಡಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು. ಅವರು 5 ಸಿಕ್ಸರ್, 3 ಬೌಂಡರಿ ಸಮೇತ 64 ರನ್ ಬಾರಿಸಿ ಔಟಾಗದೇ ಗೆಲುವಿನ ಶಾಸ್ತ್ರ ಮುಗಿಸಿದರು.
ವೆಸ್ಟ್ ಇಂಡೀಸ್ ಪರವಾಗಿ ಅಲ್ಜಾರಿ ಜೋಸೆಫ್, ಕೈಲ್ ಮೇಯರ್ಸ್ ತಲಾ 2 ವಿಕೆಟ್ ಪಡೆದರು. 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮೂಲಕ ಜಯಿಸಿತು. ಅಲ್ಲದೇ, ಕೆರೆಬಿಯನ್ನರ ವಿರುದ್ಧ ಒಟ್ಟಾರೆ 12ನೇ ಸರಣಿ ಜಯದ ಸಿಹಿ ಅನುಭವಿಸಿತು.
ಇದನ್ನೂ ಓದಿ:ನೀರಜ್ ಚೋಪ್ರಾ 'ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಕ್ರೀಡಾಪಟು': ಅಂಜು ಬಾಬಿ ಜಾರ್ಜ್