ಅಡಿಲೇಡ್(ಆಸ್ಟ್ರೇಲಿಯಾ):ವರುಣದೇವ ಮತ್ತು ಬಾಂಗ್ಲಾದೇಶದ ಬ್ಯಾಟರ್ ಲಿಟನ್ ದಾಸ್ರ ಸವಾಲನ್ನು ಮೆಟ್ಟಿನಿಂತ ಭಾರತ ಮಹತ್ವದ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮ ಪ್ರಕಾರ 5 ರನ್ಗಳಿಂದ ಗೆದ್ದು ಸೆಮಿಫೈನಲ್ ತಲುಪುವ ಹಾದಿಯನ್ನು ಸುಲಭ ಮಾಡಿಕೊಂಡಿತು. ಆಡಿದ 4 ಪಂದ್ಯಗಳಲ್ಲಿ 3 ಗೆದ್ದು 1 ಸೋತು 6 ಅಂಕಗಳೊಂದಿಗೆ ಬಿ ಗುಂಪಿನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತು.
ಅಡಿಲೇಡ್ನ ಓವಲ್ ಮೈದಾನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ಗೆ 184 ರನ್ ಗಳಿಸಿತ್ತು. 2ನೇ ಇನಿಂಗ್ಸ್ ಆರಂಭಿಸಿದ್ದ ಬಾಂಗ್ಲಾದೇಶ 7 ನೇ ಓವರ್ ವೇಳೆ ವರುಣನ ಆಗಮನವಾಯಿತು.
ಅರ್ಧಗಂಟೆಗೂ ಅಧಿಕ ಮಳೆ ಬಿದ್ದ ಕಾರಣ ಆಟವನ್ನು 16 ಓವರ್ಗೆ ಕಡಿತ ಮಾಡಿ ಗೆಲ್ಲಲು ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 151 ರನ್ ಗುರಿ ನೀಡಲಾಯಿತು. ಮತ್ತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ ಪಡೆ ಸತತ ವಿಕೆಟ್ ಕಳೆದುಕೊಂಡು ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 145 ರನ್ ಮಾತ್ರ ಗಳಿಸಿ 5 ರನ್ಗಳಿಂದ ಪರಾಭವಗೊಂಡಿತು.
ಲಿಟನ್ ದಾಸ್ ಗುಡುಗು:ಭಾರತ ನೀಡಿದ ಬೃಹತ್ ಮೊತ್ತ ಬೆಂಬತ್ತಿದ ಶಕೀಬ್ ಅಲ್ ಹಸನ್ ಪಡೆಯ ಬ್ಯಾಟರ್ ಲಿಟನ್ ದಾಸ್ ಬಿರುಸಿನ ಆರಂಭ ನೀಡಿದರು. 27 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ಗಳಿಂದ 60 ರನ್ ಗಳಿಸಿದರು. ಮಳೆ ನಿಂತ ಬಳಿಕ ಮತ್ತೆ ಆಟ ಶುರುವಾದಾಗ ಕೆಎಲ್ ರಾಹುಲ್ರ ಚಾಣಕ್ಯ ಫೀಲ್ಡಿಂಗ್ಗೆ ರನೌಟ್ ಆದರು.
ಮಳೆಯಲ್ಲಿ ತೋಯ್ದ ಬಾಂಗ್ಲಾ:ಬಾಂಗ್ಲಾದೇಶ 7 ನೇ ಓವರ್ ಆಡುತ್ತಿದ್ದಾಗ ಮಳೆ ಸುರಿಯಲಾರಂಭಿಸಿತು. ಅರ್ಧಗಂಟೆಗೂ ಹೆಚ್ಚು ಮಳೆ ಸುರಿದಿದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಆಟವನ್ನು 16 ಓವರ್ಗೆ ಕಡಿತ ಮಾಡಿ 151 ರನ್ ಗುರಿ ನಿಗದಿ ಮಾಡಲಾಯಿತು.
ಆಟ ಮರು ಆರಂಭವಾದ ಕೆಲ ಹೊತ್ತಿನಲ್ಲೇ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಲಿಟನ್ ದಾಸ್ ರಾಹುಲ್ಗೆ ರನೌಟ್ ಆದರು. ಬಳಿಕ ನಜ್ಮುಲ್ ಹುಸೈನ್ ಶ್ಯಾಂಟೋ 21 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದಾದ ನಂತರ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿ 145 ರನ್ ಗಳಿಸಿತು. ಭಾರತ ಪರ ಉತ್ತಮವಾಗಿ ಬೌಲ್ ಮಾಡಿದ ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯಾ ತಲಾ 2 ವಿಕೆಟ್ ಗಳಿಸಿದರು.