ಲೆಕ್ಕಾಚಾರದ ಪ್ರಕಾರ ಇನ್ನು ಐದು ತಿಂಗಳಿನಲ್ಲಿ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ನಡೆಯಲಿದೆ. ಆದರೆ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಉದ್ಘಾಟನೆ ಆಗಿ, ಅದೇ ಮೈದಾನದಲ್ಲಿ ಫೈನಲ್ ಸಹ ನಡೆಯಲಿದೆ ಎನ್ನಲಾಗಿದೆ. ಅಕ್ಟೋಬರ್ 5 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದ್ದು, ನವೆಂಬರ್ 19 ರಂದು ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಜರುಗಲಿದೆ.
ಮೂಲಗಳ ಪ್ರಕಾರ, ಭಾರತದ ಆರಂಭಿಕ ಪಂದ್ಯ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದ್ದು, ಅಕ್ಟೋಬರ್ 15 ರಂದು ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ಪಂದ್ಯ ನಡೆಯಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ನಂತರ ಸಂಬಂಧಿಸಿದ ಎಲ್ಲರಿಂದ ಔಪಚಾರಿಕ ಅನುಮೋದನೆಯನ್ನು ಪಡೆದು ದಿನಾಂಕ ಮತ್ತು ಸ್ಥಳಗಳ ಬಗ್ಗೆ ಅಂತಿಮ ಮಾಡಲಿದೆ ಎನ್ನಲಾಗಿದೆ.
ಏಷ್ಯಾಕಪ್ನ ಹೈಬ್ರಿಡ್ ಮಾದರಿಗೆ ಒಪ್ಪಿಕೊಳ್ಳದಿದ್ದರೆ ವಿಶ್ವಕಪ್ಗೆ ಪಾಕಿಸ್ತಾನ ಭಾರತಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಪಾಕ್ ಈಗ ಮಾತನ್ನು ಹಿಂಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಹಾಗೇ ಏಷ್ಯಾಕಪ್ನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಮಂಗಳವಾದ ಸಭೆಯಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ಬೋರ್ಡ್ ನಿರಾಕರಿಸಿದೆ ಎನ್ನಲಾಗಿದೆ. ಅದರಂತೆ ಯುಎಇಯಲ್ಲಿ ನಡೆಸಲು ಎರಡು ಕ್ರಿಕೆಟ್ ಮಂಡಳಿಗಳು ಪ್ರಸ್ತಾಪಿಸಿವೆಯಂತೆ.
ಇಲ್ಲಿಯವರೆಗಿನ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನವು ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಬಿಸಿಸಿಐ ದಕ್ಷಿಣ ವಲಯದಲ್ಲಿ ಚೆನ್ನೈನೊಂದಿಗೆ ಹೆಚ್ಚಿನ ಪಾಕಿಸ್ತಾನ ಪಂದ್ಯಗಳಿಗೆ ಸ್ಥಳಗಳನ್ನು ಒದಗಿಸಿದೆ. ಕಾರಣ ಚೆನ್ನೈ ಅತ್ಯಂತ ಕ್ರೀಡಾ ಪ್ರೇಕ್ಷಕರನ್ನು ಹೊಂದಿರುವ ಶಾಂತಿಯುತ ಆತಿಥೇಯ ಕ್ರೀಡಾಂಗಣ ಎಂಬ ದಾಖಲೆಯನ್ನು ಹೊಂದಿದೆ.