ಕರ್ನಾಟಕ

karnataka

ETV Bharat / sports

IND vs ZIM ODI: ಧವನ್​- ಗಿಲ್​​ ಜೊತೆಯಾಟ.. ಜಿಂಬಾಬ್ವೆ ವಿರುದ್ಧ 10 ವಿಕೆಟ್​ ಜಯ

ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

India vs Zimbabwe ODI
India vs Zimbabwe ODI

By

Published : Aug 18, 2022, 7:03 PM IST

ಹರಾರೆ:ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್​ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಜೊತೆಗೆ ಆತಿಥೇಯ ತಂಡದ ವಿರುದ್ಧ ಸತತ 13 ಗೆಲುವು ದಾಖಲಿಸಿರುವ ಸಾಧನೆ ಮಾಡಿದೆ.

ಜಿಂಬಾಬ್ವೆ ನೀಡಿದ್ದ 190ರನ್​​ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಯಾವುದೇ ವಿಕೆಟ್ ​ನಷ್ಟವಿಲ್ಲದೇ 30.5 ಓವರ್​​ಗಳಲ್ಲಿ 192ರನ್​ಗಳಿಸಿ, ಗೆಲುವಿನ ನಗೆ ಬೀರಿದೆ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಧವನ್​​(81) ಹಾಗೂ ಗಿಲ್​​(82)ರನ್​​ಗಳಿಸಿ ಅಜೇಯರಾಗಿ ಉಳಿದರು.

ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ಶಿಖರ್ ಧವನ್​

ಜಿಂಬಾಬ್ವೆ ಇನ್ನಿಂಗ್ಸ್​:ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆಗೆ ಆರಂಭದಲ್ಲೇ ದೀಪಕ್ ಚಹರ್ ಆಘಾತ ನೀಡಿದರು. ಆರಂಭಿಕರಾದ ಇನೋಸೆಂಟ್ ಕೈಯಾ(4), ತಡಿವಾನಾಶೆ (8) ವಿಕೆಟ್​ ಉರುಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರ ಬಳಿಕ ಮಾಧವೀರ್​ (5) ವಿಕೆಟ್ ಕೂಡಾ ಪಡೆದುಕೊಂಡರು.

ಮಧ್ಯಮ ಕ್ರಮಾಂಕದಲ್ಲಿ ವೆಸ್ಲಿ(1) ಸಿರಾಜ್​ಗೆ ಬಲಿಯಾದರೆ, ಸಿಕಂದರ್ ರಾಜಾ(12) ಪ್ರಸಿದ್ಧ ಕೃಷ್ಣ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ವಿಕೆಟ್ ಕೀಪರ್, ಕ್ಯಾಪ್ಟನ್​​​ ರೆಗಿಸ್ ಚಕಬ್ವಾ(35) ಭಾರತವನ್ನು ಸ್ವಲ್ಪ ಹೊತ್ತು ಕಾಡಿದರು. ಆದರೆ, ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಅಕ್ಸರ್ ಪಟೇಲ್ ಯಶಸ್ವಿಯಾದರು. ಇನ್ನುಳಿದಂತೆ ಬರ್ಲೆ(11), ಜೊಂಗ್ವೆ(13) ರನ್​ಗಳಿಸಿ ಔಟಾದರು.

ಇದನ್ನೂ ಓದಿ:ಭಾರತದ ಸಂಘಟಿತ ಬೌಲಿಂಗ್​ ದಾಳಿಗೆ ಜಿಂಬಾಬ್ವೆ ತತ್ತರ: 189 ರನ್​​ಗಳಿಗೆ ಆಲೌಟ್‌

9ನೇ ವಿಕೆಟ್ ಜೊತೆಯಾಟ: ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಜಿಂಬಾಬ್ವೆ ತಂಡಕ್ಕೆ 9ನೇ ವಿಕೆಟ್​ ತುಸು ಬಲ ನೀಡಿತು. ಕ್ರೀಸ್‌ನಲ್ಲಿ ಒಂದಾದ ಬ್ರಾಡ್ ಇವಾನ್ಸ್​ (33), ರಿಚರ್ಡ್​(34) ರನ್‌ ಸಂಪಾದಿಸಿ ತಂಡವನ್ನು 180ರ ಗಡಿ ದಾಟಿಸಿದರು. ಕೊನೆಯದಾಗಿ ತಂಡ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 189ರನ್​​ಗಳಿಸಿದ್ದು, ಭಾರತಕ್ಕೆ 190ರನ್​ಗಳ ಸಾಧಾರಣ ಗುರಿ ನೀಡಿದೆ.

ಟೀಂ ಇಂಡಿಯಾ ಪರ ಚಹರ್, ಪ್ರಸಿದ್ಧ ಕೃಷ್ಣ ಹಾಗೂ ಅಕ್ಸರ್ ಪಟೇಲ್ ತಲಾ 3 ವಿಕೆಟ್ ಪಡೆದರೆ, ಸಿರಾಜ್ 1 ವಿಕೆಟ್ ಕಿತ್ತರು

ಧವನ್​-ಗಿಲ್​ ಜೊತೆಯಾಟ: 190ರನ್​​ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಯಾವುದೇ ವಿಕೆಟ್​ ಕಳೆದುಕೊಳ್ಳಲಿಲ್ಲ. ಈ ಮೂಲಕ ತಾನು ಬಲಿಷ್ಠ ತಂಡ ಎಂಬುವುದನ್ನ ಮತ್ತೊಮ್ಮೆ ಸಾಬೀತು ಮಾಡಿದೆ. ಆರಂಭಿಕರಾಗಿ ಕಣಕ್ಕಿಳಿದ ಧವನ್​-ಗಿಲ್​ ಜಿಂಬಾಬ್ವೆ ಬೌಲರ್​ಗಳನ್ನ ಹಿಗ್ಗಾಮುಗ್ಗಾ ದಂಡಿಸಿದರು. ಇದರ ಜೊತೆಗೆ ಮೊದಲ ವಿಕೆಟ್​​ಗೆ 192ರನ್​​ಗಳ ಬೃಹತ್ ಜೊತೆಯಾಟದಲ್ಲಿ ಭಾಗಿಯಾದರು. ಧವನ್​​ ಅಜೇಯ 81ರನ್​​ಗಳಿಕೆ ಮಾಡಿದ್ದು, ಶುಬ್ಮನ್ ಗಿಲ್​ ಅಜೇಯ 82ರನ್​​ಗಳಿಸಿ ಜಯ ತಂದಿಟ್ಟರು.

ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ದಾಖಲೆ: ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಭಾರತ ಹೊಸದೊಂದು ದಾಖಲೆ ಬರೆದಿದೆ. ಎದುರಾಳಿ ಜಿಂಬಾಬ್ವೆ ವಿರುದ್ಧ ಸತತವಾಗಿ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಶಿಖರ್​ ಧವನ್ ದಾಖಲೆ: ಜಿಂಬಾಬ್ವೆ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್​​ ಏಕದಿನ ಕ್ರಿಕೆಟ್​ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಶಿಖರ್ ಧವನ್​ 6,500 ರನ್​​ಗಳಿಕೆ ಮಾಡಿದ್ದು, ಈ ಸಾಧನೆ ಮಾಡಿರುವ ಭಾರತದ 10ನೇ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.

ABOUT THE AUTHOR

...view details