ನವದೆಹಲಿ:ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಮ್ಯಾಚ್ ಆಡುವ ಸಾಧ್ಯತೆ ಇದೆ. ಜುಲೈ 12 ರಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರ ಪದಾರ್ಪಣೆ ಬಹುತೇಕ ಖಚಿತವಾಗಿದೆ. ಹೀಗೆ ಹೇಳಲು ಕಾರಣ ಎಂದರೆ, ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಬ್ಯಾಟ್ ಮಾಡಿದ್ದಾರೆ.
ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಅವರನ್ನು ಕೈ ಬಿಟ್ಟು ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಈಗ ಪೂಜಾರ ಜಾಗವನ್ನು ಯಾರು ಫುಲ್ ಫಿಲ್ ಮಾಡಲಿದ್ದಾರೆ ಎಂಬುದು ಪ್ರಶ್ನೆಯಾಗುತ್ತಿದೆ. ಮುಂದಿನ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಪ್ರವಾಸ ಹಾಗೂ ಮೊದಲ ಪಂದ್ಯವನ್ನು ಭಾರತ ಆಡುತ್ತಿದೆ. ಅನುಭವಿ ಆಟಗಾರರ ನಡುವೆ ಯುವ ಬ್ಯಾಟರ್ಗಳು ಎಷ್ಟು ಯಶಸ್ಸು ಕಾಣುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಗಳಲ್ಲಿ ಶುಭಮನ್ ಗಿಲ್ ಆರಂಭಿಕರಾಗಿ ಬ್ಯಾಟ್ ಬೀಸಿದ್ದರು. ಆದೆರೆ ತಂಡ ಗಿಲ್ ಅವರ ಸ್ಥಾನವನ್ನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬದಲಾಯಿಸುವ ಸಾಧ್ಯತೆ ಇದೆ. ಅದರಂತೆ ಚೇತೇಶ್ವರ ಪೂಜಾರ ಅವರ ಮೂರನೇ ಬ್ಯಾಟರ್ ಸ್ಥಾನದಲ್ಲಿ ಗಿಲ್ ಕಣಕ್ಕಿಳಿಯುವ ನಿರೀಕ್ಷೆಗಳಿವೆ. ಮೂರನೇ ಸ್ಥಾನದಲ್ಲಿ ಗಿಲ್ ಯಶಸ್ವಿ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ನಡೆದ ಅಭ್ಯಾಸ ಪಂದ್ಯದಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ 76 ಬಾಲ್ನಲ್ಲಿ 54 ರನ್ ಗಳಿಸಿತು. 67 ಬಾಲ್ ಆಡಿದ ನಂತರ ನಾಯಕ ರೋಹಿತ್ ವಿರಾಮ ತೆಗೆದುಕೊಂಡರು. ಗಂಭೀರ್ ಮತ್ತು ಸೆಹ್ವಾಗ್ ಅವರ ಆರಂಭಿಕ ಜೋಡಿಯಂತೆ ಬಲ ಮತ್ತು ಎಡ ಕಾಂಬಿನೇಷನ್ನ ಪ್ರಯೋಗವನ್ನು ನಡೆಸಲು ತಂಡ ಮುಂದಾದಂತಿದೆ. ಈ ರೀತಿಯ ಕಾಂಬಿನೇಷನ್ ಎದುರಾಳಿ ಬೌಲರ್ಗಳ ಲಯ ತಪ್ಪಿಸಲು ಸಹಕಾರಿಯಾಗಲಿದೆ.