ಫ್ಲೋರಿಡಾ (ಅಮೆರಿಕ): ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಟಿ 20 ಪಂದ್ಯ ಇಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಭಾರತ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 8 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿದೆ. ಶಾಯಿ ಹೋಪ್ (45) ಮತ್ತು ಶಿಮ್ರಾನ್ ಹೆಟ್ಮಯರ್(61) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ವೆಸ್ಟ್ ಇಂಡೀಸ್ ತಂಡವು 178 ರನ್ ಗಳಿಸಿದೆ. ಈ ಗುರಿಯನ್ನು ಬೆನ್ನತ್ತಿದ ಭಾರತ 13 ಓವರ್ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 139 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಬಿರುಸಿನ ಆಟ ಆಡುವ ಮುನ್ಸೂಚನೆ ನೀಡಿದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಆರಂಭಿಕ ಆಟಗಾರರಾದ ಕೈಲ್ ಮೇಯರ್ಸ್ (17), ಬ್ರಾಂಡನ್ ಕಿಂಗ್ (18) ರನ್ ಗಳಿಸಿ ಇಬ್ಬರೂ ಆರ್ಷದೀಪ್ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶಾಯಿ ಹೋಪ್ 2 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 45 ರನ್ ಗಳಿಸಿದರು. 45 ರನ್ ಗಳಿಸಿದ್ದಾಗ ಯಜ್ವೇಂದ್ರ ಚಾಹಲ್ ಅವರಿಗೆ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ನಿಕೋಲಸ್ ಪೂರನ್ 1 ರನ್, ರೋವನ್ ಪೊವೆಲ್ 1 ರನ್ ಗಳಿಸಿ ಔಟಾದರು. ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಶಿಮ್ರಾನ್ ಹೆಟ್ಮಯರ್ ಆಸರೆಯಾದರು. 4 ಸಿಕ್ಸರ್, 3 ಬೌಂಡರಿ ಮೂಲಕ 61 ರನ್ ಗಳಿಸಿದ ಹೆಟ್ಮಯರ್ ಆರ್ಷದೀಪ್ ಎಸೆತದಲ್ಲಿ ತಿಲಕ್ ವರ್ಮಾಗೆ ಕ್ಯಾಚಿತ್ತರು. ಬಳಿಕ ಬಂದ ಶೆಫರ್ಡ್ 9 ರನ್, ಜೇಸನ್ ಹೋಲ್ಡರ್ 3 ರನ್ ಔಟಾದರು. ಓಡಿಯನ್ ಸ್ಮಿತ್ 15 ರನ್, ಅಕೀಲ್ ಹುಸೇನ್ 5 ರನ್ ಗಳಿಸಿ ಔಟಾಗದೇ ಉಳಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡ 8 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.