ಟ್ರಿನಿಡಾಡ್ (ವೆಸ್ಟ್ ಇಂಡೀಸ್): ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ನಿರ್ಣಾಯಕ ಪಂದ್ಯ ಮಂಗಳವಾರ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಮೊದಲೆರಡು ಏಕದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿಲ್ಲ. ಇಂಡಿಯನ್ ಟೀಮ್ ಪರ ಇಶಾನ್ ಕಿಶನ್ ಹೊರತುಪಡಿಸಿ ಉಳಿದ ಎಲ್ಲಾ ಬ್ಯಾಟರ್ಗಳು ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಬಾರ್ಬಡೋಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಹಲವು ವರ್ಷಗಳ ನಂತರ ಭಾರತದ ವಿರುದ್ಧ ಗೆದ್ದು ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.
ಅದೇ ಸಮಯದಲ್ಲಿ, ಮೂರನೇ ಪಂದ್ಯ ಮಂಗಳವಾರ ತರೂಬಾ, ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿದೆ. ಏಕದಿನ ಸರಣಿಯ ಈ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾದ ಹಲವು ಬ್ಯಾಟರ್ಗಳು ಮೇಲೆ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡವಿದೆ. ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇತ್ತೀಚೆಗೆ ಸತತ ವೈಫಲ್ಯವನ್ನು ಎದುರಿಸುತ್ತಿದ್ದಾರೆ. ಎರಡನೇ ಪಂದ್ಯದಲ್ಲಿ ಪಾಲ್ಗೊಂಡಿದ್ದ ಅಕ್ಷರ್ ಪಟೇಲ್ ಬಾಲ್ ಹಾಗೂ ಬ್ಯಾಟಿಂಗ್ನಲ್ಲಿ ಯಾವುದೇ ಮ್ಯಾಜಿಕ್ ಮಾಡಿಲ್ಲ.
ತವರಿನಲ್ಲಿ ಆರನೇ ಸರಣಿಯ ಸೋಲಿನಿಂದ ತಪ್ಪಿಸಿಕೊಳ್ಳಲು ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಮೂರನೇ ಏಕದಿನ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆಯಲ್ಲಿದ್ದಾರೆ. ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಭಾರತದ ವಿರುದ್ಧ ಉತ್ತಮ ಬ್ಯಾಟಿಂಗ್ ದಾಖಲೆಯನ್ನು ಹೊಂದಿದ್ದಾರೆ. ಶಾಯ್ ಹೋಪ್ ಅವರು ತಮ್ಮ ವೃತ್ತಿಜೀವನದಲ್ಲಿ ಭಾರತದ ವಿರುದ್ಧ ಹೆಚ್ಚು ಅರ್ಧಶತಕವನ್ನು ದಾಖಲಿಸಿದ್ದಾರೆ. ಇಲ್ಲಿಯವರೆಗೆ, ಅವರು ಭಾರತದ ವಿರುದ್ಧ ಒಟ್ಟು 8 ಬಾರಿ 50+ ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಛಾಪು ಮೂಡಿಸಿದ್ದಾರೆ. ಹೋಪ್ ಇದುವರೆಗೆ ಟೀಂ ಇಂಡಿಯಾ ವಿರುದ್ಧ 49.15ರ ಸರಾಸರಿಯಲ್ಲಿ 983 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಭಾರತದ ವಿರುದ್ಧ ಏಕದಿನ ಪಂದ್ಯಗಳಲ್ಲಿ 3 ಶತಕ ಹಾಗೂ 5 ಅರ್ಧ ಶತಕ ಸಿಡಿಸಿದ್ದಾರೆ.