ಟ್ರಿನಿಡಾಡ್ (ವೆಸ್ಟ್ ಇಂಡೀಸ್): ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಸೋಲಿನ ನಂತರ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತಂಡದ ಪ್ರಯೋಗಗಳನ್ನು ಸಮರ್ಥಿಸಿಕೊಂಡಿದ್ದಾರೆ. ಏಷ್ಯಾ ಕಪ್ ಮತ್ತು ವಿಶ್ವಕಪ್ ಸಿದ್ಧತೆಗಳ ಪ್ರಯೋಗ ಅಗತ್ಯ ಎಂದಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಟೀಮ್ ಮ್ಯಾನೇಜ್ ಮೆಂಟ್ ಮಾಡುವ ಪ್ರಯೋಗ ಸರಣಿ ನಷ್ಟಕ್ಕೆ ಕಾರಣ ಆಗಬಹುದು. ಈ ಹಿನ್ನೆಲೆಯಲ್ಲಿ ತಂಡದ ಆಯ್ಕೆಯ ಬಗ್ಗೆ ಹೆಚ್ಚಿನ ಗಮನ ನೆಟ್ಟಿದೆ.
ಕಿಶನ್ ಸ್ಥಾನ ಯಾವುದು?: ಮಂಗಳವಾರದ ಸರಣಿ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಬಗ್ಗೆ ಭಾರತ ತಂಡದ ಆಡಳಿತವು ಯೋಚಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಕೂಡ ಕಾದು ನೋಡಬೇಕಿದೆ. ಆರಂಭಿಕರಾಗಿ ಗಿಲ್ ಕಾಣಿಸಿಕೊಳ್ಳುತ್ತಾರ ಇಲ್ಲಾ, ಮೊದಲ ಪಂದ್ಯದಂತೆ ರೋಹಿತ್ ಸ್ಥಾನ ಬಿಟ್ಟುಕೊಡುತ್ತಾರ ಎಂಬುದನ್ನು ತಿಳಿಯಬೇಕಿದೆ.
ಮಧ್ಯಮ ಕ್ರಮಾಂಕವೂ ಗೊಂದಲ: ಮಧ್ಯಮ ಕ್ರಮಾಂಕದ ಸೂರ್ಯ ಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಸ್ಪರ್ಧೆ ಇದೆ. ಒಂದು ಅವಕಾಶದಲ್ಲಿ ವಿಫಲವಾಗಿರುವ ಸ್ಯಾಮ್ಸನ್ಗೆ ಮತ್ತೆ ಸ್ಥಾನ ಸಿಗುತ್ತಾ ಇಲ್ಲಾ ಸೂರ್ಯ ಅವರಿಗೆ ಮೂರನೇ ಅವಕಾಶ ಸಿಗುತ್ತಾ ಎಂಬುದು ಪ್ರಶ್ನೆಯಾಗಿದೆ. ಸೂರ್ಯಕುಮಾರ್ ಅವರು ಎರಡೂ ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ಪಡೆದರು. ಆದರೆ ಅವುಗಳನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಸ್ಯಾಮ್ಸನ್ ಎರಡನೇ ಪಂದ್ಯವನ್ನಷ್ಟೇ ಆಡಿ 9 ರನ್ ಗಳಿಸಿ ಸ್ಲಿಪ್‌ನಲ್ಲಿ ಕ್ಯಾಚ್‌ಗೆ ಸಿಲುಕಿದರು. ಮಂಗಳವಾರ ಸಂಜುಗೆ ಮತ್ತೊಂದು ಅವಕಾಶ ಸಿಕ್ಕರೆ ಅದನ್ನೇ ಸದುಪಯೋಗ ಪಡಿಸಿಕೊಳ್ಳಬೇಕಾಗುತ್ತದೆ.
ಈ ವರ್ಷ ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್ನಲ್ಲಿ ಆಡುವ ಅವಕಾಶದಿಂದ ವೆಸ್ಟ್ ಇಂಡೀಸ್ ವಂಚಿತವಾಗಿದೆ. ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ತಂಡ 10 ತಂಡಗಳ ಪಟ್ಟಿಯನ್ನು ಸೇರುವುದರಲ್ಲಿ ವಿಫಲವಾಗಿದೆ. 2006 ರಿಂದ ಎರಡೂ ತಂಡಗಳು ಪರಸ್ಪರರ ವಿರುದ್ಧ 12 ದ್ವಿಪಕ್ಷೀಯ ಏಕದಿನ ಸರಣಿಗಳನ್ನು ಆಡಿವೆ ಮತ್ತು ಪ್ರತಿ ಬಾರಿ ಭಾರತ ಗೆದ್ದಿದೆ. ಈ ಬಾರಿಯ ಸರಣಿ ಗೆದ್ದಲ್ಲಿ 13ನೇ ಪ್ರಶಸ್ತಿ ಗೆದ್ದ ದಾಖಲೆಯನ್ನು ಭಾರತ ಬರೆಯಲಿದೆ.
ಲಾರಾ ಮೈದಾನದಲ್ಲಿ ಮೊದಲ ಏಕದಿನ: ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಇದು ಮೊದಲ ಏಕದಿನ ಪಂದ್ಯವಾಗಿದೆ. ಈ ಮೈದಾನದಲ್ಲಿ ಇಲ್ಲಿಯವರೆಗೆ ಕೇವಲ ಒಂದು ಪುರುಷರ ಅಂತರಾಷ್ಟ್ರೀಯ ಪಂದ್ಯವನ್ನು ಮಾತ್ರ ಆಡಲಾಗಿದೆ. ಕಳೆದ ವರ್ಷ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಟಿ20 ಪಂದ್ಯವನ್ನು ಭಾರತ ಗೆದ್ದಿತ್ತು. ಅದೇ ಸಮಯದಲ್ಲಿ, 23 ಲಿಸ್ಟ್ ಎ ಪಂದ್ಯಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಕೇವಲ ಏಳು ಬಾರಿ 250 ರ ಗಡಿ ದಾಟಿವೆ.