ಪೋರ್ಟ್ ಆಫ್ ಸ್ಪೇನ್:ಭಾರತ- ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವೆಲ್ನಲ್ಲಿ ನಿನ್ನೆಯಿಂದ (ಗುರುವಾರ) ಪ್ರಾರಂಭವಾಗಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತು. ವಿರಾಟ್ ಕೊಹ್ಲಿ 161 ಎಸೆತಗಳಲ್ಲಿ 87 ಮತ್ತು ರವೀಂದ್ರ ಜಡೇಜಾ 84 ಎಸೆತಗಳಲ್ಲಿ 36 ರನ್ಗಳಿಸಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ಗಳಾದ ರೋಹಿತ್ ಶರ್ಮಾ (80) ಮತ್ತು ಯಶಸ್ವಿ ಜೈಸ್ವಾಲ್ (57) ಜೋಡಿ 131 ರನ್‌ಗಳ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ಮೊದಲ ಸೆಷನ್‌ನಲ್ಲಿ ಭಾರತದ ಆರಂಭಿಕ ಜೋಡಿಯನ್ನು ಬೇರ್ಪಡಿಸಲು ಕೆರೆಬಿಯನ್ನರಿಗೆ ಸಾಧ್ಯವಾಗಲಿಲ್ಲ. ಜೈಸ್ವಾಲ್ 49 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ನಾಯಕ ರೋಹಿತ್ ಶರ್ಮಾ 74 ಎಸೆತಗಳಲ್ಲಿ ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಭೋಜನ ವಿರಾಮದ ಹೊತ್ತಿಗೆ ಭಾರತ ವಿಕೆಟ್ ನಷ್ಟವಿಲ್ಲದೆ 121 ರನ್ ಗಳಿಸಿತ್ತು.
ಶುಭಮನ್ ಗಿಲ್ ಮತ್ತೆ ವಿಫಲ: ಬಳಿಕ ವಿಂಡೀಸ್ ಬೌಲರ್ಗಳು ಬಿಗಿ ಬೌಲಿಂಗ್ ಮಾಡಿದರು. ವಿರಾಮದ ಬಳಿಕ 61 ರನ್ಗಳಿಗೆ ಭಾರತ 4 ವಿಕೆಟ್ ಕಳೆದುಕೊಂಡಿತು. ಹೋಲ್ಡರ್ ಎಸೆತದಲ್ಲಿ ಜೈಸ್ವಾಲ್ ಕ್ಯಾಚೌಟ್ ಆದರೆ, ಶುಭ್ಮನ್ ಗಿಲ್ (10) ಕೆಮರ್ ರೋಚ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಎರಡನೇ ಟೆಸ್ಟ್ ಪಂದ್ಯದಲ್ಲೂ ಉತ್ತಮ ಸ್ಕೋರ್ ಗಳಿಸುವಲ್ಲಿ ಗಿಲ್ ವಿಫಲರಾದರು. ಮತ್ತೊಂದೆಡೆ, ಉತ್ತಮ ಲಯದಲ್ಲಿದ್ದ ನಾಯಕ ರೋಹಿತ್ ಶರ್ಮಾ, ಜೊಮೆಲ್ ವಾರಿಕ್ಯಾನ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಎರಡನೇ ಪಂದ್ಯದಲ್ಲೂ ಶತಕ ವಂಚಿತರಾದರು.