ಟ್ರಿನಿಡಾಡ್ (ವೆಸ್ಟ್ ಇಂಡೀಸ್): 500ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡುತ್ತಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸರ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟಿದ್ದಾರೆ.
ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುತ್ತಿರುವ ಎರಡನೇ ದಿನದಾಟ ಪಂದ್ಯದಲ್ಲಿ ಕೊಹ್ಲಿ 180ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕದ ಗಡಿದಾಟಿದರು. ಸರ್ ಡಾನ್ ಬ್ರಾಡ್ಮನ್ 52 ಟೆಸ್ಟ್‌ಗಳಲ್ಲಿ 29 ಶತಕಗಳನ್ನು ಗಳಿಸಿದ್ದರೆ, ಕೊಹ್ಲಿ ತಮ್ಮ 111ನೇ ಟೆಸ್ಟ್‌ನಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಕೊಹ್ಲಿ ಬಾರಿಸಿದ ಒಟ್ಟಾರೆ ತಮ್ಮ ಕ್ರಿಕೆಟ್ ವೃತ್ತಿಜೀವನದ 76ನೇ ಶತಕ ಇದಾಗಿದೆ.
ವಿಶೇಷ ಎಂದರೆ ವಿದೇಶ ನೆಲದಲ್ಲಿ 2018ರ ನಂತರ ಕೊಹ್ಲಿ ಸಿಡಿಸಿದ ಮೊದಲ ಶತಕ ಇದಾಗಿದೆ. 2018ರ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದರು. ಅಲ್ಲದೇ, ಟೆಸ್ಟ್‌ನಲ್ಲಿ ರನ್ ಮಷಿನ್ ಖ್ಯಾತಿಯ ಕೊಹ್ಲಿ ಅವರಿಂದ ವೆಸ್ಟ್ ಇಂಡೀಸ್ ವಿರುದ್ಧ ಮೂಡಿ ಬಂದ ಮೂರನೇ ಟೆಸ್ಟ್ ಶತಕ ಹಾಗೂ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಸಿಡಿಸಿದ ನಾಲ್ಕನೇ ಶತಕ ಇದಾಗಿದೆ.