ಗಯಾನಾ (ವೆಸ್ಟ್ ಇಂಡೀಸ್): ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ 1-0ಯಿಂದ ಮುನ್ನಡೆಯಲ್ಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ಗಯಾನದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ. ದ್ವಿತೀಯ ಪಂದ್ಯ ನಾಳೆ ಮತ್ತು ಮೂರನೇ ಪಂದ್ಯ ಆಗಸ್ಟ್ 8 ರಂದು ನಡೆಯಲಿದೆ. ಪ್ರಾವಿಡೆನ್ಸ್ ಸ್ಟೇಡಿಯಂನ ಹಿಂದಿನ ಪಂದ್ಯಗಳಲ್ಲಿ ಟಿ20 ಸರಾಸರಿ ಸ್ಕೋರ್ಗಳು ಬಂದಿವೆ. ಹೀಗಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.
ಗಯಾನಾದಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂ ಅನ್ನು 2006 ರಲ್ಲಿ ನಿರ್ಮಿಸಲಾಯಿತು. ಈ ಮೈದಾನದಲ್ಲಿ ನಡೆಯುವ ಪಂದ್ಯವನ್ನು ಒಟ್ಟು 15000 ಪ್ರೇಕ್ಷಕರು ಕುಳಿತುಕೊಂಡು ವೀಕ್ಷಿಸಬಹುದಾಗಿದೆ. ಈ ಮೈದಾನದಲ್ಲಿ ಮೂರು ಮಾದರಿಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇಲ್ಲಿ 2010 ಏಪ್ರಿಲ್ 30 ರಂದು ಮೊದಲ ಟಿ20 ಪಂದ್ಯವನ್ನು ಆಡಿಸಲಾಗಿತ್ತು. ಇದರಲ್ಲಿ ನ್ಯೂಜಿಲೆಂಡ್ ವೆಸ್ಟ್ ಇಂಡೀಸ್ ವಿರುದ್ಧ 2 ವಿಕೆಟ್ಗಳ ಗೆಲುವು ಸಾಧಿಸಿತ್ತು. ಕೊನೆಯದಾಗಿ ಇಲ್ಲಿ 2022 ಜುಲೈ 7ರಂದು ವಿಂಡೀಸ್ ಮತ್ತು ಬಾಂಗ್ಲಾದೇಶ ಪಂದ್ಯವನ್ನಾಡಿತ್ತು. ಇದರಲ್ಲಿ ವೆಸ್ಟ್ ಇಂಡೀಸ್ ತಂಡ 5 ವಿಕೆಟ್ಗಳ ಗೆಲುವನ್ನು ದಾಖಲಿಸಿತ್ತು.
ಪ್ರಾವಿಡೆನ್ಸ್ ಸ್ಟೇಡಿಯಂ ಗಯಾನಾದ ಈ ಮೈದಾನದಲ್ಲಿ ಇದುವರೆಗೆ ಒಟ್ಟು 11 ಟಿ 20 ಪಂದ್ಯಗಳನ್ನು ಆಡಿಸಲಾಗಿದೆ. 7 ಪಂದ್ಯಗಳನ್ನು ವೆಸ್ಟ್ ಇಂಡೀಸ್ ತಂಡ ಆಡಿದ್ದು, ಅದರಲ್ಲಿ 3 ಗೆದಿದೆ ಮತ್ತು 2 ರಲ್ಲಿ ಸೋತಿದೆ. ಹಾಗೇ ಎರಡು ಪಂದ್ಯ ಫಲಿತಾಂಶ ಕಂಡಿಲ್ಲ. ಈ ಮೈದಾನದಲ್ಲಿ ಭಾರತೀಯ ಕ್ರಿಕೆಟ್ ತಂಡ 6 ಆಗಸ್ಟ್ 2019 ರಂದು ಒಂದು ಟಿ20 ಪಂದ್ಯವನ್ನು ಆಡಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 7 ವಿಕೆಟ್ನಿಂದ ಮಣಿಸಿತ್ತು.