ನವದೆಹಲಿ:ಜನವರಿ 3 ರಿಂದ 7 ರವರೆಗೆ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಮೊದಲ ಪಂದ್ಯ ಜ.3 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ, ಜ.5 ರಂದು ಪುಣೆಯಲ್ಲಿ 2ನೇ ಪಂದ್ಯ ಮತ್ತು ಜನವರಿ 7 ರಂದು ರಾಜ್‌ಕೋಟ್‌ನಲ್ಲಿ ಮೂರನೇ ಪಂದ್ಯ ನಡೆಯಲಿದೆ.
ಚುಟುಕು ಸರಣಿಯ ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಿಗದಿಯಾಗಿದೆ. ಮೊದಲ ಏಕದಿನ ಜ.10 ರಂದು ಗುವಾಹಟಿಯಲ್ಲಿಯೂ, ಎರಡನೇ ಪಂದ್ಯ ಜನವರಿ 12 ರಂದು ಕೋಲ್ಕತ್ತಾ ಮತ್ತು 3ನೇ ಪಂದ್ಯ ಜನವರಿ 15 ರಂದು ತಿರುವನಂತಪುರದಲ್ಲಿ ಏರ್ಪಾಡಾಗಿದೆ.
ಭಾರತ-ನ್ಯೂಜಿಲೆಂಡ್ ಸರಣಿ: ಶ್ರೀಲಂಕಾ ಸರಣಿಯ ಬಳಿಕ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಮೊದಲ ಏಕದಿನ ಪಂದ್ಯ ಜ.18 ರಂದು ಹೈದರಾಬಾದ್‌ನಲ್ಲಿ, ಎರಡನೇ ಪಂದ್ಯ ಜನವರಿ 21 ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಕ್ರೀಡಾಂಗಣದಲ್ಲಿ ಮತ್ತು ಕೊನೆಯ ಮೂರನೇ ಪಂದ್ಯ ಜನವರಿ 24 ರಂದು ಇಂದೋರ್‌ನಲ್ಲಿ ನಡೆಯಲಿದೆ.
ಏಕದಿನ ಸರಣಿಯ ನಂತರ, ಮೊದಲ ಟಿ20 ಜ.27 ರಂದು ರಾಂಚಿ, ಎರಡನೇ ಪಂದ್ಯ ಜ.29 ರಂದು ಲಕ್ನೋ ಮತ್ತು ಅಂತಿಮ ಪಂದ್ಯ ಫೆಬ್ರವರಿ 1ರಂದು ಅಹಮದಾಬಾದ್‌ನಲ್ಲಿ ನಡೆಯುತ್ತದೆ. ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿ ಮುಗಿದ ಮೇಲೆ ಭಾರತ ತಂಡವು ಒಂದು ವಾರ ವಿರಾಮ ಪಡೆಯಲಿದೆ.
ಭಾರತ vs ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ:ಇದಾದ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತವು ತವರಿನಲ್ಲೇ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಅವಧಿಯಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ಫೆಬ್ರವರಿ 9 ರಿಂದ 13 ರವರೆಗೆ, ಎರಡನೇ ಟೆಸ್ಟ್ ಫೆಬ್ರವರಿ 17-21 ರವರೆಗೆ ದೆಹಲಿಯಲ್ಲಿ ನಡೆಯಲಿದೆ.
ಮೂರನೇ ಪಂದ್ಯ ಧರ್ಮಶಾಲಾದಲ್ಲಿ ಮಾರ್ಚ್ 1 ರಿಂದ ಮಾರ್ಚ್ 5 ರವರೆಗೆ ಮತ್ತು ನಾಲ್ಕನೇ ಟೆಸ್ಟ್ ಮಾರ್ಚ್ 9-14 ರವರೆಗೆ ಅಹಮದಾಬಾದ್‌ನಲ್ಲಿ ನಿಗದಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳು ಮುಗಿದ ಬಳಿಕ ಮೂರು ಏಕದಿನ ಪಂದ್ಯಗಳ ಸರಣಿ ನಡೆಯುತ್ತದೆ. ಮೊದಲ ಪಂದ್ಯ ಮಾರ್ಚ್ 17 ರಂದು ಮುಂಬೈನಲ್ಲಿ, ಎರಡನೇ ಪಂದ್ಯ ಮಾರ್ಚ್ 19 ರಂದು ವಿಶಾಖಪಟ್ಟಣದಲ್ಲಿ ಮತ್ತು ಮೂರನೇ ಪಂದ್ಯ ಮಾರ್ಚ್ 22 ರಂದು ಚೆನ್ನೈನಲ್ಲಿ ನಡೆಯಲಿದೆ.
2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ 2-1 ರಿಂದ ಗೆದ್ದುಕೊಂಡಿತ್ತು. ಇದೇ ಭರವಸೆಯೊಂದಿಗೆ ಬ್ಲೂ ಆರ್ಮಿ ತವರು ನೆಲದಲ್ಲಿ ಒಂದರ ಮೇಲೊಂದು ಸರಣಿಗಳನ್ನು ಆಡಿ ಐತಿಹಾಸಿಕ ಸಾಧನೆ ಮಾಡಲು ಸಿದ್ದವಾಗಿದೆ. ಮತ್ತೊಂದೆಡೆ, ಕ್ರಿಕೆಟ್ ಅಭಿಮಾನಿಗಳು ಸತತ ಮೂರು ತಿಂಗಳು ಕ್ರಿಕೆಟ್ ಸಂಭ್ರಮ ಸವಿಯುವ ಕಾತರದಲ್ಲಿದ್ದಾರೆ.
ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಸಾಧಿಸುವತ್ತ ಟೀಂ ಇಂಡಿಯಾ