ಕೊಲಂಬೊ:ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಆತಿಥೇಯ ಶ್ರೀಲಂಕಾ ತಂಡ ಸೋಲು ಕಂಡಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಭಾರತ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಈ ಪಂದ್ಯ ಸೋಲುತ್ತಿದ್ದಂತೆ ಶ್ರೀಲಂಕಾ ಕ್ಯಾಪ್ಟನ್ ಹಾಗೂ ಕೋಚ್ ನಡುವೆ ಮಾತಿನ ಚಕಮಕಿ ನಡೆಯಿತು.
ಲಂಕಾ ನೀಡಿದ 276 ರನ್ ಬೆನ್ನತ್ತಿದ್ದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 196 ರನ್ಗಳಿಕೆ ಮಾಡಿ, ಸೋಲಿನ ಸುಳಿಗೆ ಸಿಲುಕಿಕೊಂಡಿತ್ತು. ಈ ವೇಳೆ ಆಕರ್ಷಕ ಜೊತೆಯಾಟವಾಡಿದ ದೀಪಕ್ ಚಹರ್ (69) ಹಾಗೂ ಉಪನಾಯಕ ಭುವನೇಶ್ವರ್ ಕುಮಾರ್ (19) ತಂಡವನ್ನು ಗೆಲುವಿನ ದಡ ಸೇರಿಸಿದರು. ಸುಲಭವಾಗಿ ಗೆಲುವು ಸಾಧಿಸಬೇಕಾದ ಪಂದ್ಯದಲ್ಲಿ ಲಂಕಾ ಪಡೆ ಸೋಲು ಕಂಡಿದ್ದರಿಂದ ತಂಡದ ಕೋಚ್ ಮಿಕ್ಕಿ ಆರ್ಥರ್ ಆಕ್ರೋಶಗೊಂಡರು. ಜೊತೆಗೆ, ಕ್ಯಾಪ್ಟನ್ ದಸುನ್ ಶನಕ್ ವಿರುದ್ಧ ವಾಗ್ದಾಳಿ ನಡೆಸಿದರು.