ನವದೆಹಲಿ:ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಟಿ20 ಸರಣಿಯಲ್ಲಿ ಶ್ರೀಲಂಕಾವನ್ನು 2-1ರ ಅಂತರದಿಂದ ಮಣಿಸಿ ಸಾಮರ್ಥ್ಯ ಸಾಬೀತುಪಡಿಸಿದೆ. ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಏಕದಿನ ಸರಣಿ ಆರಂಭವಾಗುತ್ತಿದ್ದು, ಶ್ರೀಲಂಕಾವನ್ನು ಮತ್ತೊಮ್ಮೆ ಸೋಲಿಸುವ ಭಾರತ ಸಜ್ಜಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಪಂದ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಉಭಯ ದೇಶಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮಂಗಳವಾರದಿಂದ ಆರಂಭವಾಗಲಿದೆ. ಸರಣಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಲಿದ್ದಾರೆ. ಮೊದಲ ಪಂದ್ಯ ಜನವರಿ 10 ರಂದು ಗುವಾಹಟಿಯ ಬಾಲಸ್ಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿಗದಿಯಾಗಿದೆ. ಎರಡನೇ ಪಂದ್ಯ ಜನವರಿ 12ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತದೆ. ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಜನವರಿ 15ರಂದು ತಿರುವನಂತಪುರಂನಲ್ಲಿರುವ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏರ್ಪಾಡಾಗಿದೆ. ಈ ಎಲ್ಲ ಪಂದ್ಯಗಳು ಮಧ್ಯಾಹ್ನ 1:30ಕ್ಕೆ ಆರಂಭವಾಗಲಿವೆ.
ಇತ್ತಂಡಗಳ ನಡುವೆ ನಡೆದ ಕೊನೆಯ ಐದು ಏಕದಿನ ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಭಾರತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ ಶ್ರೀಲಂಕಾ ಕೇವಲ ಒಂದು ಪಂದ್ಯಗಳಲ್ಲಿ ಮೇಲುಗೈ ತೋರಿದೆ. ಭಾರತ ಏಕದಿನ ಪಂದ್ಯಗಳಲ್ಲಿ ಲಂಕಾ ಮೇಲೆ ಹಿಡಿತ ಸಾಧಿಸಿದೆ. ತವರಿನಲ್ಲಿ ಆಡಿದ 51 ಪಂದ್ಯಗಳಲ್ಲಿ ಭಾರತಕ್ಕೆ 36ರಲ್ಲಿ ಜಯಭೇರಿ ಸಿಕ್ಕಿದೆ. ಶ್ರೀಲಂಕಾ ತಂಡ 12 ಪಂದ್ಯಗಳಲ್ಲಿ ಗೆಲುವು ಪಡೆದರೆ, ಮೂರು ಪಂದ್ಯಗಳ ಫಲಿತಾಂಶ ಹೊರಬಿದ್ದಿಲ್ಲ. ತವರಿನಲ್ಲಿ ಮಾತ್ರವಲ್ಲ, ಶ್ರೀಲಂಕಾದಲ್ಲೂ ಭಾರತ ತಾನೇ ಬಲಶಾಲಿ ಎಂಬುದನ್ನು ಪ್ರದರ್ಶಿಸಿದೆ. ಉಭಯ ತಂಡಗಳ ನಡುವಿನ 64 ಪಂದ್ಯಗಳಲ್ಲಿ ಭಾರತ 30 ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾ ತಂಡಕ್ಕೆ 28 ಪಂದ್ಯಗಳಲ್ಲಿ ವಿಜಯ ಸಿಕ್ಕಿದೆ. ಆರು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಂದಿಲ್ಲ.
ವರ್ಷದ ಮೊದಲ ಸರಣಿ ಗೆಲುವು:ಟಿ20 ಸರಣಿಯ ಕೊನೆಯ ಪಂದ್ಯದಲ್ಲಿಭಾರತ ನೀಡಿದ್ದ ಬೃಹತ್ ಮೊತ್ತ ಬೆನ್ನಟ್ಟಿದ ಸಿಂಹಳೀಯರು 137 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಸೋಲನ್ನಪ್ಪಿತ್ತು. ಭಾರತ ಪರ ಅರ್ಷ್‌ದೀಪ್ ಸಿಂಗ್ ಮೂರು ವಿಕೆಟ್ ಮತ್ತು ಮಲಿಕ್, ಹಾರ್ದಿಕ್ ಪಾಂಡ್ಯ, ಚಹಾಲ್ ತಲಾ ಎರಡು ವಿಕೆಟ್ ಪಡೆದಿದ್ದರು. ಈ ಮೂಲಕ ಭಾರತ 91ರನ್ಗಳ ಅಂತರದ ಗೆಲುವು ಸಾಧಿಸಿ ವರ್ಷದ ಮೊದಲ ಸರಣಿ ಗೆದ್ದು ಬೀಗಿತು.