ರಾಜ್ಕೋಟ್: ಟಿ20 ಟಾಪ್ ರ್‍ಯಾಂಕಿಂಗ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಟಿ-20ಯಲ್ಲಿ ತಮ್ಮ 3 ನೇ ಶತಕ ದಾಖಲಿಸಿದ್ದಾರೆ. ಈ ಮೂಲಕ ಸಿಂಹಳೀಯರಿಗೆ 229 ರನ್ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿದ್ದಾರೆ. ಲಂಕಾ ಬೌಲರ್ಗಳನ್ನು ಕಾಡಿದ ಸ್ಕೈ 45 ಎಸೆತದಲ್ಲಿ 3 ನೇ ಶತಕ ದಾಖಲಿಸಿದ್ದಾರೆ. 7 ಫೋರ್ ಮತ್ತು 9 ಸಿಕ್ಸ್ಗಳನ್ನು ಸಿಡಿಸಿದ ಯಾದವ್ 51 ಎಸೆತದಲ್ಲಿ 112 ರನ್ ದಾಖಲಿಸಿ ಅಜೇಯರಾಗಿ ಉಳಿದರು. 20 ಓವರ್ಗೆ 5 ವಿಕೆಟ್ ನಷ್ಟಕ್ಕೆ ಭಾರತ 228 ರನ್ ಗಳಿಸಿತು.
ಗಿಲ್ ಜಾಗ್ರತೆಯ ಆಟ:ಭಾರತ ಮೂರು ರನ್ ಗಳಿಸುತ್ತಿದ್ದಂತೆ ಇಶನ್ ಕಿಶನ್ ವಿಕೆಟನ್ ಮೊದಲ ಓವರ್ನಲ್ಲೇ ದಿಲ್ಶನ್ ಮಧುಶಂಕ ಪಡೆದುಕೊಂಡರು. ಕಿಶನ್ ವಿಕೆಟ್ ನಂತರ ಬಂದ ರಾಹುಲ್ ತ್ರಿಪಾಠಿ ಶುಭಮನ್ ಗಿಲ್ ಜೊತೆಯಾದರು. ತ್ರಿಪಾಠಿ ಬಿರುಸಿನ ಆಟಕ್ಕೆ ಮುಂದಾದರೆ ಗಿಲ್ ಜಾಗ್ರತೆ ಆಟಕ್ಕೆ ಅಣಿಯಾಗಿದ್ದರು. ರಾಹುಲ್ ತ್ರಿಪಾಠಿ ಬಿರುಸಿನ ಆಟ ಪ್ರದರ್ಶಿಸಿದರು. 16ಎಸೆತದಲ್ಲಿ 5 ಬೌಂಡರಿ ಮತ್ತು ಎರಡು ಸಿಕ್ಸರ್ನಿಂದ್ 35 ರನ್ಗಳಿಸಿ ಕರುಣಾ ರತ್ನೆಗೆ ವಿಕೆಟ್ ಒಪ್ಪಿಸಿದರು.
ತ್ರಿಪಾಠಿ ನಂತರ ಕ್ರೀಸ್ಗೆ ಬಂದ ಟಿ 20 ಟಾಪ್ ರ್‍ಯಾಂಕಿಂಗ್ ಬ್ಯಾಟರ್ ಯಾದವ್ ಕಳೆದ ವರ್ಷದ ಬ್ಯಾಟಿಂಗ್ ಛಾಪನ್ನು ತಂದರು. ಕಳೆದೆರಡು ಪಂದ್ಯಗಳಲ್ಲಿ ವಿಫಲತೆ ಕಂಡು ತಾಳ್ಮೆಯಿಂದ ರನ್ ಕದಿಯುತ್ತಿದ್ದ ಗಿಲ್ 36 ಎಸೆತದಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ನಿಂದ 46 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಕೇವಲ ನಾಲ್ಕು ರನ್ನಿಂದ ಚೊಚ್ಚಲ ಟಿ20 ಅರ್ದ ಶತಕದಿಂದ ವಂಚಿತರಾದರು.
ಗಿಲ್ ವಿಕೆಟ್ ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ(4) ಬಿರುಸಿನ ಆಟ ಪ್ರದರ್ಶಿಸುವ ಓಘದಲ್ಲಿ ಕ್ಯಾಚ್ಇತ್ತು ಮರಳಿದರು. ಹಾರ್ದಿಕ್ ಬೆನ್ನಲ್ಲೆ ಬಂದ ಹೂಡ(4) ಕೂಡ ಅವರ ಹಾದಿಯನ್ನೇ ಹಿಡಿದರು. ನಂತರ ಬಂದ ಅಕ್ಷರ್ ಪಟೇಲ್ ಹಿಂದಿನ ಎರಡು ಪಂದ್ಯಗಳಂತೆ ವಿಕೆಟ್ ಕಾಯ್ದುಕೊಂಡರು. ಹಾಗೇ ಸೂರ್ಯ ಕುಮಾರ್ ಯಾದವ್ಗೆ ಕ್ರೀಸ್ ಬಿಟ್ಟು ಕೊಟ್ಟು ಶತಕಕ್ಕೆ ನೆರವಾದರು.