ರಾಜ್ಕೋಟ್: ಆತಿಥೇಯ ಭಾರತಕ್ಕೆ ಮತ್ತು ಪ್ರವಾಸಿ ಲಂಕಾಗೆ ನಿರ್ಣಾಯಕ ಪಂದ್ಯವಾಗಿರುವ ಮೂರನೇ ಟಿ20ಯಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಲಂಕಾ ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ಭಾನುಕಾ ರಾಜಪಕ್ಸೆ ಸ್ಥಾನಕ್ಕೆ ಅವಿಷ್ಕಾ ಫರ್ನಾಂಡೋ ಬಂದಿದ್ದಾರೆ.
ಸರಣಿಯ ಎರಡು ಪಂದ್ಯಗಳಲ್ಲಿ ಕೊನೆಯ ಓವರ್ ನಿರ್ಣಾಯಕ ಪಾತ್ರ ವಹಿಸಿತ್ತು. ಮೊದಲ ಪಂದ್ಯದಲ್ಲಿ ಅಕ್ಷರ್ ಪಟೇಲ್ ಮಾಡಿದ ಸ್ಪಿನ್ ಮೋಡಿ ಸಿಂಹಳೀಯರು ಬಲಿಯಾದರು. ಸಾಧಾರಣ ಗುರಿ ಬೆನ್ನು ಹತ್ತಿದ್ದ ತಂಡಕ್ಕೆ ಎರಡು ರನ್ನಿಂದ ಸೋಲನುಭವಿಸ ಬೇಕಾಯಿತು. ಎರಡನೇ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಭಾರತ ಗೆಲುವಿನ ಹೊಸ್ತಿಲಲ್ಲಿ ಇತ್ತಾದರೂ ಲಂಕನ್ನರ ಕರಾರುವಕ್ಕು ದಾಳಿಗೆ ಮಣಿದು 16 ರನ್ನಿಂದ ಸೋಲನುಭವಿಸ ಬೇಕಾಯಿತು. ಅಲ್ಲದೇ 6 ನೋಬಾಲ್ ಸೇರಿ ಎರಡನೇ ಪಂದ್ಯದಲ್ಲಿ ಬೌಲರ್ಗಳು ಹೆಚ್ಚುವರಿಯಾಗಿ ನೀಡಿದ್ದ 27 ರನ್ ನೀಡಿದ್ದು ಭಾರತಕ್ಕೆ ಮುಳುವಾಗಿತ್ತು.
ಟಾಸ್ ಗೆದ್ದ ನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಾವು ಮೊದಲು ಬ್ಯಾಟ್ ಮಾಡಲು ಇಚ್ಚಿಸುತ್ತೇವೆ. ಮೊದಲು ಬ್ಯಾಟ್ ಮಾಡುವವರಿಗೆ ಪಿಚ್ ಉತ್ತಮವಾಗಿದೆ. ಕಳೆದ ಬಾರಿ ಈ ಪಿಚ್ನಲ್ಲಿ ಆಡಿದಾಗ ಉತ್ತಮ ರನ್ ಕದಿಯಲು ಸಾಧ್ಯವಾಗಿತ್ತು. ಎರಡನೇ ಇನ್ನಿಂಗ್ಸ್ ವೇಳೆ ಸ್ವಿಂಗ್ ಹೆಚ್ಚಾಗಿರುವುದರಿಂದ ಬೌಲರ್ಗಳಿಗೆ ಸಹಕಾರವಾಗಲಿದೆ. ಕೊನೆಯ ಪಂದ್ಯದಲ್ಲಿ ತಂಡ ಉತ್ತಮ ಆಟ ಪ್ರದರ್ಶಿಸುವಲ್ಲಿ ಎಡವಿತ್ತು. ಈ ಬಾರಿ ಬೃಹತ್ ಟಾರ್ಗೆಟ್ ನೀಡುವ ಗುರಿಯನ್ನು ಹೊಂದಿದ್ದೇವೆ. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಭಾರತ ತಂಡದಲ್ಲಿ ಎರಡು ಪಂದ್ಯಗಳಲ್ಲಿ ವಿಫಲತೆ ಕಂಡಿರುವ ಗಿಲ್ ಅವರನ್ನು ತಂಡದಿಂದ ಕೈಬಿಟ್ಟು ದೇಶಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗಾಯಕ್ವಾಡ್ ಅವರಿಗೆ ಅವಕಾಶ ದೊರೆಯ ಬಹುದು ಎಂದು ಹೇಳಲಾಗಿತ್ತು. ಅಲ್ಲದೇ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಬೌಲಿಂಗ್ ಪಡೆಯಲ್ಲೂ ಬದಲಾವಣೆ ನಿರೀಕ್ಷಿಸಲಾತ್ತು. ಆದರೆ, ಹಾರ್ದಿಕ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿದೇ ಅದೇ ಟೀಂ ಅಂಕಣಕ್ಕಿಳಿಸಿದ್ದಾರೆ.