ತಿರುವನಂತಪುರಂ(ಕೇರಳ):ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಭಾರತ ತಂಡವು ಶ್ರೀಲಂಕಾ ವಿರುದ್ಧ 317 ರನ್‌ಗಳ ಬೃಹತ್ ಅಂತರದ ಐತಿಹಾಸಿಕ ಜಯ ದಾಖಲಿಸಿತು. ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಕೇವಲ 73 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಹೀನಾಯವಾಗಿ ಸೋಲೊಪ್ಪಿಕೊಂಡಿತು. ಈ ಮೂಲಕ ರೋಹಿತ್ ಶರ್ಮಾ ಪಡೆ ಸರಣಿ ಕ್ಲೀ ಸ್ವೀಪ್ ಮಾಡಿಕೊಂಡಿತು.
ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಭಾರತ ಮೊದಲು ಬ್ಯಾಟಿಂಗ್ ಆರಂಭಿತು. ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಭರ್ಜರಿ ಶತಕ ಸಿಡಿಸಿದ್ದರಿಂದ ಭಾರತ 5 ವಿಕೆಟ್ ನಷ್ಟಕ್ಕೆ 390 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಬ್ಯಾಟಿಂಗ್ ನಂತರ ಬೌಲಿಂಗ್ನಲ್ಲೂ ಟೀಂ ಇಂಡಿಯಾ ಮಾಸ್ಟರ್‌ಕ್ಲಾಸ್ ಆಟ ಪ್ರದರ್ಶನ ನೀಡಿತು. ಭಾರತ ಪರ ಮೊಹಮ್ಮದ್ ಸಿರಾಜ್ ಅವರು ಕೇವಲ 32 ರನ್ ಬಿಟ್ಟು ಕೊಟ್ಟು 4 ವಿಕೆಟ್ ಕಬಳಿಸಿದರು. ಭಾರತದ ಬೌಲಿಂಗ್ ದಾಳಿಗೆ ಸಿಂಹಳಿಯರು ಅಲ್ಪ ಮೊತ್ತಕ್ಕೆ (73) ಆಲೌಟ್ ಆದರು. ಇದರ ಪರಿಣಾಮವಾಗಿ ಶ್ರೀಲಂಕಾ ವಿರುದ್ಧ ಭಾರತ 317 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಅಂತರದ ಗೆಲುವು ಇದಾಗಿದೆ.
ಭಾರತ ಬ್ಯಾಟಿಂಗ್ ಮಾಡುವಾಗ ಬ್ಯಾಟರ್ ಫ್ರೆಂಡ್ಲಿ ಪಿಚ್ನಂತೆ ಕಂಡು ಬಂದರೂ ಎರಡನೇ ಇನ್ನಿಂಗ್ಸ್ನಲ್ಲಿ ತನ್ನ ಗುಣಧರ್ಮವನ್ನೇ ಬದಲಿಸಿದಂತಿತ್ತು. ಸಿರಾಜ್, ಶಮಿ ಮತ್ತು ಕುಲ್ದೀಪ್ ಯಾದವ್ ದಾಳಿಗೆ ನಲುಗಿದ ಸಿಂಹಳೀಯರು 73 ರನ್ಗೆ ಆಲ್ಔಟ್ ಆದರು. ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿನ ಭಾರತೀಯ ಬೌಲರ್ಗಳ ಕೈಚಳಕಕ್ಕೆ ನಾಲ್ಕು ಬ್ಯಾಟರ್ಗಳು 1 ರನ್ಗೆ ವಿಕೆಟ್ ಒಪ್ಪಿಸಿದರೆ, ಮೂವರು 19, 13 ಮತ್ತು 11 ರನ್ಗೆ ವಿಕೆಟ್ ಒಪ್ಪಿಸಿ ತಂಡದ ಹೀನಾಯ ಸೋಲಿಗೆ ಕಾರಣರಾದರು.
ಸಿರಾಜ್ ಅವರು ತಮ್ಮ ಮೊದಲ ಎರಡು ಓವರ್ಗಳಲ್ಲಿ ಆರಂಭಿಕರಾದ ಅವಿಷ್ಕ ಫೆರ್ನಾಂಡೋ (1) ಮತ್ತು ಕುಸಲ್ ಮೆಂಡಿಸ್ (4) ಅವರ ವಿಕೆಟ್ ಪಡೆದರು. ನಂತರ ಬಂದ ಚರಿತ್ ಅಸಲಂಕ (1) ಅವರನ್ನು ಶಮಿ ಔಟ್ ಮಾಡಿದರು. ನುವಾನಿಡು ಫೆರ್ನಾಂಡೋ ಶಮಿ ಮತ್ತು ಸಿರಾಜ್ ದಾಳಿಗೆ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದರು. ನುವಾನಿಡು ಅವರು 19 ರನ್ ಗಳಿಸಿ ಆಡುತ್ತಿದ್ದಾಗ ಸಿರಾಜ್ಗೆ ಕ್ಲೀನ್ ಬೌಲ್ಡ್ ಆದರು. ಅವರ ಬೆನ್ನಲ್ಲೆ ವನಿಂದು ಹಸರಂಗ (1) ಕೂಡ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು.
ಹಸರಂಗ ಔಟ್ ಆದ ನಂತರ ಬಂದ ಚಾಮಿಕ ಕರುಣಾರತ್ನೆ, ಸಿರಾಜ್ ಮಾಡಿದ ರನ್ ಔಟ್ಗೆ ಬಲಿಯಾದರು. ಇತ್ತ ಐದನೇ ವಿಕೇಟ್ ಆಗಿ ಬಂದಿದ್ದ ನಾಯಕ ದಸುನ್ ಶನಕ ನಿಧಾನ ಗತಿಯಲ್ಲಿ ಬ್ಯಾಟ್ ಮಾಡುತ್ತಿದ್ದರು. ಆದರೆ ಅವರಿಗೆ ಯಾರೂ ಜೊತೆಯಾಟ ನೀಡಲೇ ಇಲ್ಲ. ಕುಲ್ದೀಪ್ ಯಾದವ್ ಸ್ಪಿನ್ ದಾಳಿಗೆ ನಾಯಕ ಶನಕ ಬೌಲ್ಡ್ ಆಗಿ ಹೊರ ನಡೆದರು. ಸರಣಿ ವಿಕೆಟ್ ಪತನದಿಂದ ಗೆಲುವಿನ ಭರವಸೆ ಕಳೆದು ಕೊಂಡಿತ್ತು. ಗಾಯಗೊಂಡು ಹೊರಹೋದ ಜೆಫ್ರಿ ವಂಡರ್ಸೆ ಪರವಾಗಿ ತಂಡಕ್ಕೆ ಸೇರಿದ್ದ ದುನಿತ್ ವೆಲ್ಲಲಾಗೆ 3 ರನ್ಗೆ ಔಟ್ ಆದರು. ನಂತರ ಲಹಿರು ಕುಮಾರ್ ಕೂಡ ಕುಲ್ದೀಪ್ಗೆ ವಿಕೆಟ್ ಒಪ್ಪಿಸಿದರು. ಕಸುನ್ ರಜಿತ 13 ರನ್ಗಳಿಸಿ ಅಜೇಯರಾಗಿ ಉಳಿದರು. ಅಶೇನ್ ಬಂಡಾರ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರಿಂದ ಬ್ಯಾಟಿಂಗ್ಗೆ ಬರಲಿಲ್ಲ.