ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಟಿ-20 ಸರಣಿಯ ಎರಡನೇ ಪಂದ್ಯ ಪುಣೆಯಲ್ಲಿ ನಡೆಯಲಿದೆ. ಭಾರತ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಎರಡು ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ಶ್ರೀಲಂಕಾಗೆ 163 ರನ್‌ಗಳ ಗುರಿ ನೀಡಿತ್ತು. ಆದರೆ, ಇಡೀ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ವೇಗದ ಬೌಲರ್ ಶಿವಂ ಮಾವಿ ತಮ್ಮ ಮೊದಲ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿ ನಾಲ್ಕು ವಿಕೆಟ್ ಪಡೆದರು. ಹರ್ಷಲ್ ಮತ್ತು ಉಮ್ರಾನ್ ಮಲಿಕ್ ತಲಾ ಎರಡು ವಿಕೆಟ್ ಪಡೆದರು.
ಎರಡನೇ ಪಂದ್ಯಕ್ಕೆ ಭಾರತ ಬಹುತೇಕ ಗೆದ್ದ ತಂಡವನ್ನೇ ಇಳಿಸುವ ಸಾಧ್ಯತೆ ಇದೆ. ಆದರೆ, ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶುಭ್ಮನ್ ಗಿಲ್ ವಿಫಲತೆ ಕಂಡಿರುವುದರಿಂದ ಅವರ ಜಾಗಕ್ಕೆ ಋತುರಾಜ್ ಗಾಯಕ್ವಾಡ್ ಆಡಿಸುವ ಸಾಧ್ಯತೆ ಇದೆ. ಆದರೆ, ಒಂದೇ ಪಂದ್ಯದ ಆಟದಿಂದ ಗಿಲ್ ಅವರನ್ನು ಕೈ ಬಿಡುವುದು ಸೂಕ್ತವಾಗಿರುವುದಿಲ್ಲ. ಅವರ ಬ್ಯಾಟಿಂಗ್ ಮೇಲೆ ಭರವಸೆ ಹೆಚ್ಚಿರುವುದರಿಂದ ಇನ್ನೊಂದು ಅವಕಾಶ ನೀಡುವ ಸಾಧ್ಯತೆಯೂ ಇದೆ.
ರಿತುರಾಜ್ ಇದುವರೆಗೆ ಟೀಂ ಇಂಡಿಯಾ ಪರ 9 ಟಿ-20 ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 16.88 ಸರಾಸರಿಯಲ್ಲಿ ಕೇವಲ 135 ರನ್ ಗಳಿಸಿದ್ದಾರೆ ಮತ್ತು 1 ಅರ್ಧಶತಕವನ್ನು ಗಳಿಸಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ರುತುರಾಜ್ ಗಾಯಕ್ವಾಡ್ ಕೊನೆಯ ಟಿ-20 ಪಂದ್ಯವನ್ನು ಆಡಿದ್ದರು.
ಭರವಸೆ ಹೆಚ್ಚಿಸಿದ ಬೌಲರ್ಗಳು: ಪದಾರ್ಪಣೆ ಪಂದ್ಯದಲ್ಲೇ ನಾಲ್ಕು ವಿಕೆಟ್ ಪಡೆಯುವ ಮೂಲಕ ಶಿವಂ ಮಾವಿ ಉತ್ತಮ ಎಂಟ್ರಿ ಪಡೆದಿದ್ದಾರೆ. ಐಪಿಎಲ್ನಿಂದ ಉತ್ತಮ ಬೌಲಿಂಗ್ ಮಾಡಿಕೊಂಡು ಬರುತ್ತಿರುವ ಮಾವಿಗೆ ಭಾರತದಲ್ಲಿ ಇನ್ನಷ್ಟು ಅವಕಾಶಗಳು ದೊರೆಯಲಿದೆ ಎಂದು ಹಿರಿಯ ಕ್ರಿಕೆಟಿಗರು ಅಭಿಪ್ರಾಯಿಸುತ್ತಿದ್ದಾರೆ. ಅಲ್ಲದೇ ಯುವ ವೇಗಿ ಉಮ್ರನ್ ಮಲಿಕ್ ಮೊದಲ ಪಂದ್ಯದಲ್ಲಿ ಗಂಟೆಗೆ 155 ಕಿ.ಮಿ ವೇಗದಲ್ಲಿ ಬೌಲಿಂಗ್ ಮಾಡಿ, ಜಸ್‌ಪ್ರೀತ್ ಬೂಮ್ರಾ ಅವರ ದಾಖಲೆ ಅಳಿಸಿ ಹಾಕಿದ್ದಾರೆ.
ಎರಡನೇ ಇನ್ನಿಂಗ್ಸ್ ವೇಳೆ ಇಬ್ಬನಿ ಇಂದ ರನ್ ಚೇಸ್ ಮಾಡಲು ಸಹಕಾರಿಯಾಗಲಿದೆ ಎಂದು ಶನಕ ಅಭಿಪ್ರಾಯಿಸಿದ್ದರು. ಆದರೆ, ಭಾರತದ ಪರ ಬೌಲರ್ಗಳು ಡ್ಯೂ ಇದ್ದರೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಭಾರತದ ಪರ ಮೂವರು ವೇಗಿಗಳು ವಿಕೆಟ್ ಪಡೆದು ಲಂಕಾವನ್ನು 160ರನ್ಗೆ ಕಟ್ಟಿಹಾಕಿದರು. ಈ ಮೂಲಕ ಚೇಸಿಂಗ್ಗೆ ಹೆಚ್ಚು ಗೆಲುವು ಸಿಗುತ್ತಿದ್ದ ಪಿಚ್ನಲ್ಲಿ ದಾಖಲೆ ತಿರುಚಿದ್ದಾರೆ.