ಪಾರ್ಲ್(ದಕ್ಷಿಣ ಆಫ್ರಿಕಾ):ಅಂತಿಮ ಹಾಗು ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 296 ರನ್ ಕಲೆಹಾಕಿತು. ದಕ್ಷಿಣ ಆಫ್ರಿಕಾ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು 297 ರನ್ ಗಳಿಸಬೇಕಿದೆ.
ಭಾರತ ಪರ ಬೊಂಬಟ್ ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ (108) ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ತಿಲಕ್ ವರ್ಮಾ (52) ಅರ್ಧಶತಕ ಪೂರೈಸಿದರು. ಸಂಕಷ್ಟದ ಸಂದರ್ಭದಲ್ಲಿ ಶತಕದ ಜೊತೆಯಾಟವಾಡಿದ ಸಂಜು ಮತ್ತು ತಿಲಕ್ ಜೋಡಿ ತಂಡಕ್ಕೆ ಆಸರೆಯಾದರು.
ದ.ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ 3 ವಿಕೆಟ್ ಪಡೆದರೆ, ನಾಂಡ್ರೆ ಬರ್ಗರ್ (2), ವಿಯಾನ್ ಮುಲ್ಡರ್, ಲಿಜಾಡ್ ವಿಲಿಯಮ್ಸ್ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಉರುಳಿಸಿದರು.
ಟಾಸ್ ಗೆದ್ದ ಹರಿಣ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಭಾರತಕ್ಕೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ರಜತ್ ಪಾಟಿದಾರ್ ಮತ್ತು ಸಾಯಿ ಸುದರ್ಶನ್ ಜೋಡಿ ಆರಂಭಿಕರಾಗಿ ಕ್ರೀಸ್ಗಿಳಿದರು. ಆದರೆ ಪಾಟಿದಾರ್ 22 ರನ್ ಗಳಿಸಿ ನಾಂದ್ರೆ ಬರ್ಗರ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಸಾಯಿ ಸುದರ್ಶನ್ ಕೂಡಾ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಎಂಟನೇ ಓವರ್ನಲ್ಲಿ ಸಾಯಿ ಸುದರ್ಶನ್ 10 ರನ್ ಗಳಿಸಿ ಹೆನ್ರಿಕ್ಸ್ ಎಸೆತದಲ್ಲಿ ಆಟ ಮುಗಿಸಿದರು.
ಮತ್ತೊಂದೆಡೆ, ತಂಡದಲ್ಲಿ ಅಗ್ನಿಪರೀಕ್ಷೆ ಎದುರಿಸುತ್ತಿರುವ ಸಂಜು ತಾಳ್ಮೆಯುತ ಆಟವನ್ನು ನಾಯಕ ಕೆ.ಎಲ್ ರಾಹುಲ್ ಜೊತೆ ಮುಂದುವರೆಸಿ ಹಂತಹಂತವಾಗಿ ತಂಡದ ರನ್ ವೇಗ ಹೆಚ್ಚಿಸಲು ಯತ್ನಿಸಿದರು. ಇದಾದ ಬಳಿಕ ಇನಿಂಗ್ಸ್ನ 19ನೇ ಓವರ್ನ ಕೊನೆಯ ಎಸೆತದಲ್ಲಿ ಕೆ.ಎಲ್.ರಾಹುಲ್ 21 ರನ್ ಗಳಿಸಿ ವಿಯಾನ್ ಮುಲ್ಡರ್ಗೆ ವಿಕೆಟ್ ಒಪ್ಪಿಸಿದರು.
ಆದರೆ ಸಂಜು ಮಾತ್ರ ತಿಲಕ್ ವರ್ಮಾ ಅವರೊಂದಿಗೆ ಆಟ ಮುಂದುವರಿಸುವಲ್ಲಿ ಸಫಲರಾದರು. ನಿಧನಗತಿಯಲ್ಲೇ ರನ್ ಗಳಿಸಿದ ಈ ಜೋಡಿ ಶತಕದ ಜೊತೆಯಾಟವಾಡಿತು. 77 ಎಸೆತಗಳನ್ನು ಎದುರಿಸಿದ ತಿಲಕ್ (52 ರನ್) 4 ಬೌಂಡರಿ ಮತ್ತು ಒಂದು ಸಿಕ್ಸ್ ಸಿಡಿಸಿ ಅರ್ಧಶತಕದಾಟವಾಡಿ ಕೇಶವ್ ಮಹಾರಾಜ್ ಬೌಲಿಂಗ್‌ನಲ್ಲಿ ಔಟಾದರು. ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಸಂಜು (108 ರನ್) ಕೂಡ 114 ಬಾಲ್ನಲ್ಲಿ ಆರು ಬೌಂಡರಿ ಹಾಗು ಮೂರು ಆಕರ್ಷಕ ಸಿಕ್ಸ್ ಮೂಲಕ ತಮ್ಮ ಚೊಚ್ಚಲ ಶತಕ ಪೂರೈಸಿ, ರಿಂಕ್ ಸಿಂಗ್ ಜೊತೆ ಆಟ ಮುಂದುವರೆಸಿದರು.
ಕೊನೆಯ 10 ಓವರ್ಗಳಲ್ಲಿ ತಂಡಕ್ಕೆ ಹೆಚ್ಚಿನ ರನ್ಗಳ ಅವಶ್ಯಕತೆ ಇದ್ದಾಗ ಬ್ಯಾಟಿಂಗ್ ವೇಗ ಹೆಚ್ಚಿದ ಸಂಜು, ಲಿಜಾಡ್ ವಿಲಿಯಮ್ಸ್ ಎಸೆತದಲ್ಲಿ ಔಟಾಗಿ ಕ್ರೀಸ್ನಿಂದ ಹೊರನಡೆದರು. ಇವರ ಹಿಂದೆಯೇ ಅಕ್ಷರ್ ಪಟೇಲ್ (1 ರನ್) ಹೆಂಡ್ರಿಕ್ಸ್ಗೆ ಎರಡನೇ ವಿಕೆಟ್ ಕೊಟ್ಟರು. ಬಳಿಕ ಬಂದ ವಾಷಿಂಗ್ಟನ್ ಸುಂದರ್ (14 ರನ್) ಉತ್ತಮವಾಗಿ ಆಡುವಾಗ 49ನೇ ಓವರ್ನಲ್ಲಿ ಹೆಂಡ್ರಿಕ್ಸ್ ಬೌಲಿಂಗ್‌ನಲ್ಲಿ ಮಾರ್ಕ್ರಾಮ್ಗೆ ಕ್ಯಾಚಿತ್ತರು.
ಹೊಡಿಬಡಿ ಆಟವಾಡುತ್ತಿದ್ದ ರಿಂಕು (38 ರನ್) ಅಂತಿಮ ಓವರ್ನಲ್ಲಿ ಸಿಕ್ಸ್ ಹೊಡೆಯುವ ಭರದಲ್ಲಿ ನಾಂಡ್ರೆ ಬರ್ಗರ್ ಅವರಿಗೆ ವಿಕೆಟ್ ನೀಡಿದರು. ಅರ್ಷದೀಪ್ ಸಿಂಗ್ (7) ಮತ್ತು ಅವೇಶ್ ಖಾನ್ (1) ಭಾರತದ ಇನಿಂಗ್ಸ್ ಮುಕ್ತಾಯ ಮಾಡಿದರು.
ದಕ್ಷಿಣ ಆಫ್ರಿಕಾ ತಂಡ:ಏಡನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೀ), ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೊರ್ಜಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ನಾಂಡ್ರೆ ಬರ್ಗರ್, ಲಿಜಾಡ್ ವಿಲಿಯಮ್ಸ್, ಬ್ಯೂರಾನ್ ಹೆಂಡ್ರಿಕ್ಸ್, ಕ್ರೈಜ್ಲೆ ಸ್ಹ್ಯಾಮ್ ವೆರೆಸಿನ್ ಒಟ್ನಿಯೆಲ್ ಬಾರ್ಟ್‌ಮನ್, ಮಿಹ್ಲಾಲಿ ಎಂಪೊಂಗ್ವಾನಾ, ಆಂಡಿಲೆ ಫೆಹ್ಲುಕ್ವಾಯೊ
ಭಾರತ ತಂಡ :ಕೆ.ಎಲ್.ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿ.ಕೀ), ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್, ಯುಜ್ವೇಂದ್ರ ಚಾಹಲ್, ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್
ಇದನ್ನೂ ಓದಿ:ಇಂದು ದ.ಆಫ್ರಿಕಾ ವಿರುದ್ಧ ಅಂತಿಮ ಏಕದಿನ ಪಂದ್ಯ: ಉತ್ತಮ ಆರಂಭದ ನಿರೀಕ್ಷೆಯಲ್ಲಿ ಭಾರತ