ಪಾರ್ಲ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವನ್ನು ಭಾರತ 78 ರನ್‌ಗಳಿಂದ ಗೆದ್ದುಕೊಂಡಿತು. ಇಲ್ಲಿಯ ಪಾರ್ಲ್ ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಸಂಜು ಸ್ಯಾಮ್ಸ್ನ್ ಅವರ ಚೊಚ್ಚಲ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 45.5 ಓವರ್‌ಗಳಲ್ಲಿ 218 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಭಾರತ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ 2-1 ಅಂತರದಿಂದ ಗೆದ್ದುಕೊಂಡಿತು.
ಇದಕ್ಕೂ ಮೊದಲು ಟಾಸ್ ಗೆದ್ದ ಹರಿಣ ಪಡೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿ ಭಾರತಕ್ಕೆ ಬ್ಯಾಟಿಂಗ್ಗೆ ಆಹ್ವಾನಿಸಿತು. ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರಜತ್ ಪಾಟಿದಾರ್ ಮತ್ತು ಸಾಯಿ ಸುದರ್ಶನ್ ಜೋಡಿ ಆರಂಭಿಕರಾಗಿ ಕ್ರೀಸ್ಗಿಳಿದರು. ಆದರೆ, ಪಾಟಿದಾರ್ 22 ರನ್ ಗಳಿಸಿ ನಾಂದ್ರೆ ಬರ್ಗರ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಸಾಯಿ ಸುದರ್ಶನ್ ಕೂಡಾ ಹೆಚ್ಚು ರನ್ಗಳಿಸಲು ಸಾಧ್ಯವಾಗಲಿಲ್ಲ. ಎಂಟನೇ ಓವರ್ನಲ್ಲಿ ಸಾಯಿ ಸುದರ್ಶನ್ 10 ರನ್ ಗಳಿಸಿ ಹೆನ್ರಿಕ್ಸ್ ಎಸೆತದಲ್ಲಿ ಆಟ ಮುಗಿಸಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಇನಿಂಗ್ಸ್ನ 19ನೇ ಓವರ್ನ ಕೊನೆಯ ಎಸೆತದಲ್ಲಿ ಕೆ.ಎಲ್.ರಾಹುಲ್ 21 ರನ್ ಗಳಿಸಿ ವಿಯಾನ್ ಮುಲ್ಡರ್ಗೆ ವಿಕೆಟ್ ಒಪ್ಪಿಸಿದರು.
ಈ ವೇಳೆ ಸಂಜು ಮತ್ತು ತಿಲಕ್ ವರ್ಮಾ ಕ್ರೀಸ್ನಲ್ಲಿ ನೆಲೆಯೂರಿ ಆಟ ಮುಂದುವರಿಸುವಲ್ಲಿ ಸಫಲರಾದರು. ನಿಧನಗತಿಯಲ್ಲೇ ರನ್ ಗಳಿಸಿದ ಈ ಜೋಡಿ ಶತಕದ ಜೊತೆಯಾಟ ಆಡಿತು. 77 ಎಸೆತಗಳನ್ನು ಎದುರಿಸಿದ ತಿಲಕ್ 52 ರನ್ ಕೆಲಹಾಕಿ ಅರ್ಧಶತಕದಾಟವಾಡಿ ಕೇಶವ್ ಮಹಾರಾಜ್ ಬೌಲಿಂಗ್‌ನಲ್ಲಿ ಔಟಾದರು. ಮತ್ತೊಂದೆಡೆ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಸಂಜು (108 ರನ್) ಕೂಡ 114 ಬಾಲ್ನಲ್ಲಿ ಆರು ಬೌಂಡರಿ ಹಾಗೂ ಮೂರು ಆಕರ್ಷಕ ಸಿಕ್ಸ್ ಮೂಲಕ ತಮ್ಮ ಚೊಚ್ಚಲ ಶತಕ ಪೂರೈಸಿ ವಿಲಿಯಮ್ಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಉಳಿದಂತೆ ರಿಂಕು ಸಿಂಗ್ 38 ರನ್ಗಳ ಕಲೆ ಹಾಕುವ ಮೂಲಕ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಕೊಡುಗೆ ನೀಡಿದರು.
ದ.ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ 3 ವಿಕೆಟ್ ಪಡೆದರೆ, ನಾಂಡ್ರೆ ಬರ್ಗರ್ 2, ವಿಯಾನ್ ಮುಲ್ಡರ್, ಲಿಜಾಡ್ ವಿಲಿಯಮ್ಸ್ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಉರುಳಿಸಿದರು.