ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ):ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಇಂದಿನಿಂದ ಆರಂಭವಾಗಿದೆ. ಜೋಹಾನ್ಸ್ಬರ್ಗ್ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಭಾರತದ ಬೌಲರ್ಗಳ ಬಿಗು ದಾಳಿಗೆ ತರಗಲೆಗಳಂತೆ ಉದುರಿದ ದಕ್ಷಿಣ ಆಫ್ರಿಕಾ ಕೇವಲ 116 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ ಭಾರತದ ಗೆಲುವಿಗೆ 117 ರನ್ ಬೇಕಿದೆ.
ಅರ್ಷದೀಪ್ ಸಿಂಗ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಚೊಚ್ಚಲ 5 ವಿಕೆಟ್ ಸಾಧನೆ ಮಾಡಿದರು. ಅವೇಶ್ ಖಾನ್ 4 ವಿಕೆಟ್ ಉರುಳಿಸಿದರು. ಭಾರತೀಯರ ಕರಾರುವಾಕ್ ಬೌಲಿಂಗ್ ದಾಳಿಗೆ ಪರದಾಡಿದ ದಕ್ಷಿಣ ಆಫ್ರಿಕಾ ಕಡಿಮೆ ರನ್ ಗಳಿಕೆ ಮಾಡಿತು.
ದ.ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಕಣಕ್ಕಿಳಿದ ರೀಜಾ ಹೆಂಡ್ರಿಕ್ಸ್ ಮತ್ತು ಟೋನಿ ಡಿ ಜೋರ್ಜಿ ಜೋಡಿ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಅರ್ಷದೀಪ್ ಅವರ ಮೊದಲ ಓವರ್ನ ನಾಲ್ಕನೇ ಎಸೆತದಲ್ಲೇ ರೀಜಾ ಹೆಂಡ್ರಿಕ್ಸ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಬಳಿಕ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (0) ಕೂಡ ಅರ್ಷದೀಪ್ಗೆ ವಿಕೆಟ್ ಒಪ್ಪಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಒಂದೆಡೆ, 3 ವಿಕೆಟ್ ಕಳೆದುಕೊಂಡರೂ ಕೂಡಾ ಎಡಗೈ ಬ್ಯಾಟರ್ ಜೋರ್ಜಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ ಕೆಲವು ಪವರ್ ಹಿಟ್ಟಿಂಗ್ ಮೂಲಕ ಮಾರ್ಕ್ರಾಮ್ರೊಂದಿಗೆ 39 ರನ್ ಜೊತೆಯಾಟವಾಡಿದರು. ಆದರೆ ಮತ್ತೆ ದಾಳಿಗಿಳಿದ ಅರ್ಷದೀಪ್ ಸಿಂಗ್ ಅಪಾಯಕಾರಿಯಾಗಿ ಕಾಣುತ್ತಿದ್ದ ಜೋರ್ಜಿ(28) ಅವರನ್ನು ಔಟ್ ಮಾಡಿದರು. ಹೆನ್ರಿಚ್ ಕ್ಲಾಸೆನ್ (6) ಹಾಗು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಂಡಿಲೆ ಫೆಹ್ಲುಕ್ವಾಯೊ (33) ಕೂಡ ವಿಕೆಟ್ ಚೆಲ್ಲಿದರು.