ವಿಶಾಖಪಟ್ಟಣ(ಆಂಧ್ರಪ್ರದೇಶ):ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ರ ಅರ್ಧಶತಕಗಳ ಬಲದಿಂದ ವಿಶಾಖಪಟ್ಟಣದ ಡಾ.ವೈ.ಎಸ್.ರಾಜಶೇಖರ್ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಭಾರತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಮೂರನೇ ಪಂದ್ಯದಲ್ಲೂ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ ಬೌಲಿಂಗ್ ಆಯ್ಕೆ ಮಾಡಿಕೊಂಡು, ಭಾರತಕ್ಕೆ ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು. ಇನಿಂಗ್ಸ್ ಆರಂಭಿಸಿದ ಯುವ ಆಟಗಾರರಾದ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಮಿಂಚಿನ ಆರಂಭ ನೀಡಿದರು.
ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್ 35 ಎಸೆತಗಳಲ್ಲಿ 2 ಸಿಕ್ಸರ್ 7 ಬೌಂಡರಿ ಸಮೇತ 57 ರನ್ ಚಚ್ಚಿದರು. ಗಾಯಕ್ವಾಡ್ಗೆ ಉತ್ತಮ ಸಾಥ್ ನೀಡಿದ ಇಶಾನ್ ಕಿಶನ್ ಕೂಡ 35 ಎಸೆತಗಳಲ್ಲಿ 54 ರನ್ ಬಾರಿಸಿದರು. 5 ಬೌಂಡರಿ 2 ಸಿಕ್ಸರ್ ಇನಿಂಗ್ಸ್ನಲ್ಲಿತ್ತು. ಇವರಿಬ್ಬರೂ ಮೊದಲ ವಿಕೆಟ್ಗೆ 97 ರನ್ ಕಲೆ ಹಾಕಿದರು.