ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಹರಿಣಗಳ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿರುವ ಭಾರತ ಸರಣಿ ಗೆಲುವಿನ ಕಸನನ್ನು ಕೈಚೆಲ್ಲಿ, ಸರಣಿ ಸಮಬಲಕ್ಕಾಗಿ ಇಲ್ಲಿನ ನ್ಯೂಲ್ಯಾಂಡ್ನಲ್ಲಿ ಹೋರಾಟ ನಡೆಸಲಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಉಭಯ ತಂಡಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಮತ್ತು ಜೆರಾಲ್ಡ್ ಕೊಯೆಟ್ಜಿ ಬದಲಾಗಿ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲುಂಗಿ ಎನ್ಗಿಡಿ ಆಯ್ಕೆ ಆಗಿದ್ದಾರೆ. ಅಲ್ಲದೇ ಕೇಶವ್ ಮಹಾರಾಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಅಶ್ವಿನ್ ಬದಲಾಗಿ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಬದಲಾಗಿ ಮುಖೇಶ್ ಕುಮಾರ್ ಆಡುತ್ತಿದ್ದಾರೆ. ನಾಲ್ವರು ಪ್ರಮುಖ ವೇಗಿಗಳಿಗೆ ರೋಹಿತ್ ಸ್ಥಾನ ನೀಡಿದ್ದಾರೆ.
ಎಲ್ಗರ್ಗೆ ವಿದಾಯದ ಪಂದ್ಯ: ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಭಾರತದ ವಿರುದ್ಧದ ಸರಣಿಯ ನಂತರ ರೆಡ್ ಬಾಲ್ ಕ್ರಿಕೆಟ್ಗೆ ವಿದಾಯ ಹೇಳುವುದಾಗಿ ತಿಳಿಸಿದ್ದರು. ಹೀಗಾಗಿ ಎಲ್ಗರ್ಗೆ ಇದು ಕೊನೆಯ ಸರಣಿ ಮತ್ತು ಪಂದ್ಯವಾಗಿದೆ. ತೆಂಬಾ ಬವುಮಾ ಗಾಯಗೊಂಡಿರುವುದರಿಂದ ಈ ಪಂದ್ಯದ ನಾಯಕತ್ವವೂ ಎಲ್ಗರ್ಗೆ ಒಲಿದಿದೆ. ಅಂತಿಮ ಟೆಸ್ಟ್ನ್ನು ನಾಯಕನಾಗಿ ಗೆಲ್ಲುವ ಗುರಿಯನ್ನು ಡೀನ್ ಎಲ್ಗರ್ ಹೊಂದಿದ್ದಾರೆ.
ನ್ಯೂಲ್ಯಾಂಡ್ನಲ್ಲಿ ಗೆಲ್ಲುವ ಗುರಿ: ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲುವು ಸಾಧಿಸಿಲ್ಲ. ಅಲ್ಲದೇ ವಿಶ್ವದ ಅತ್ಯಂತ ರಮಣೀಯ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲೂ ಭಾರತದ ತಂಡ ಇದುವರೆಗೆ ಆಡಿರುವ ಟೆಸ್ಟ್ ಗೆದ್ದಿಲ್ಲ. ಇಲ್ಲಿ ಈ ಹಿಂದೆ ಹರಿಣಗಳ ಜೊತೆಯಲ್ಲಿ ಭಾರತ ಆರು ಟೆಸ್ಟ್ಗಳನ್ನು ಆಡಿದ್ದು, ಎಲ್ಲದರಲ್ಲೂ ಸೋಲುಂಡಿದೆ. ಈ ಪಂದ್ಯವನ್ನು ಗೆದ್ದು ಸರಣಿ ಸಮಬಲದ ಜೊತೆಗೆ ಮೈದಾನದಲ್ಲಿನ ಕಳಪೆ ಇತಿಹಾಸವನ್ನು ತಿದ್ದಲು ರೋಹಿತ್ ಪಡೆ ಲೆಕ್ಕಾಚಾರ ಹಾಕುತ್ತಿದೆ.