ಕರ್ನಾಟಕ

karnataka

ETV Bharat / sports

IND vs SA 2nd Test: 2ನೇ ಟೆಸ್ಟ್ ಗೆದ್ದು ಸರಣಿ ಸಮಬಲ ಸಾಧಿಸಿದ ದ.ಆಫ್ರಿಕಾ - ಟೆಸ್ಟ್​​ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ

ಜೋಹಾನ್ಸ್​ಬರ್ಗ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟೆಸ್ಟ್​​ ಪಂದ್ಯದಲ್ಲಿ 7 ವಿಕೆಟ್​ಗಳ ಅಂತರದ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಕೈಚೆಲ್ಲಿದೆ.

South Africa win johannesburg test
South Africa win johannesburg test

By

Published : Jan 6, 2022, 9:34 PM IST

Updated : Jan 6, 2022, 10:29 PM IST

ಜೋಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ - ಭಾರತ ತಂಡಗಳ ನಡುವೆ ನಡೆದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಹರಿಣಗಳ ಪಡೆ 7 ವಿಕೆಟ್​ಗಳ ಅಂತರದ ಗೆಲುವು ದಾಖಲಿಸಿದ್ದು, ಮೂರು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿತು.

240 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 40 ಓವರ್​​ಗಳಲ್ಲಿ 2 ವಿಕೆಟ್​ನಷ್ಟಕ್ಕೆ 118 ರನ್​ಗಳಿಸಿತು. ಇಂದು ಬ್ಯಾಟಿಂಗ್ ಮುಂದುವರೆಸಿದ ತಂಡ 7 ವಿಕೆಟ್​​ಗಳ ಅಂತರದ ಸುಲಭ ಗೆಲುವಿನ ನಗೆ ಬೀರಿದೆ.

ದಕ್ಷಿಣ ಆಫ್ರಿಕಾ ಪರ ಎರಡನೇ ಇನ್ನಿಂಗ್ಸ್​​ನಲ್ಲಿ ಏಡೆನ್​ ಮಾರ್ಕ್ರಮ್​​(31), ಕೀಗನ್​ ಪೀಟರ್ಸನ್​​(28)ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ತದನಂತರ ನಾಯಕ ಎಲ್ಗರ್​​ ಅಜೇಯ 96ರನ್​​ ಹಾಗೂ ಡುಸ್ಸೆನ್​ ​(40) ರನ್​ಗಳಿಕೆ ಮಾಡಿ ತಂಡವನ್ನು ಗೆಲುವಿನತ್ತ ತೆಗೆದುಕೊಂಡು ಹೋದರು. ಡುಸ್ಸೆನ್​ ವಿಕೆಟ್​ ಬೀಳುತ್ತಿದ್ದಂತೆ ನಾಯಕ ಎಲ್ಗರ್​ ಜೊತೆ ಸೇರಿದ ಬಾವುಮಾ ಅಜೇಯ 23 ರನ್​ಗಳಿಕೆ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ ತಂಡ 67.4 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 243ರನ್​ಗಳಿಕೆ ಮಾಡಿ ಗೆಲುವು ಸಾಧಿಸಿದೆ.

ಎರಡನೇ ಇನ್ನಿಂಗ್ಸ್​​ನಲ್ಲಿ ಭಾರತದ ಪರ ಬುಮ್ರಾ, ಠಾಕೂರ್, ಅಶ್ವಿನ್ ತಲಾ 1 ವಿಕೆಟ್ ಪಡೆದುಕೊಂಡರು.

ಜೋಹಾನ್ಸ್ ಬರ್ಗ್​​ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 202 ರನ್​​ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾಗೆ ಶಾರ್ದೂಲ್ ಠಾಕೂರ್ ಇನ್ನಿಲ್ಲದಂತೆ ಕಾಡಿದರು. 7 ವಿಕೆಟ್ ಪಡೆಯುವ ಮೂಲಕ ಠಾಕೂರ್‌ ಆಫ್ರಿಕಾ ತಂಡ 229 ರನ್​ಗಳಿಗೆ ಸರ್ವಪತನಕ್ಕೆ ಕಾರಣವಾದರು.

27 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 266ರನ್​ಗಳಿಗೆ ಆಲೌಟ್​ ಆಗಿತ್ತು. ತಂಡದ ಪರ ಮಾಯಾಂಕ್ ಅಗರವಾಲ್ 23, ಚೇತೇಶ್ವರ ಪೂಜಾರ 53, ಅಜಿಂಕ್ಯ ರಹಾನೆ 58, ಹನುಮ ವಿಹಾರಿ 40ರನ್​ಗಳಿಕೆ ಮಾಡಿದ್ದರು.

ಜೋಹಾನ್ಸ್‌ಬರ್ಗ್‌ನಲ್ಲಿ ಮೊದಲ ಸಲ ಟೆಸ್ಟ್‌ ಸೋತ ಭಾರತ

ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನ ವಾಂಡರರ್ಸ್​​ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್​​ ಪಂದ್ಯದಲ್ಲಿ ಭಾರತ ಮೊದಲ ಸಲ ಸೋಲು ಕಂಡಿದೆ, ಇಲ್ಲಿಯವರೆಗೂ ಈ ಮೈದಾನದಲ್ಲಿ 5 ಪಂದ್ಯಗಳನ್ನಾಡಿರುವ ಭಾರತ 2 ರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಆದರೆ, ಇದೀಗ ನಡೆದ ಪಂದ್ಯದಲ್ಲಿ 7 ವಿಕೆಟ್​ಗಳ ಸೋಲು ಕಂಡಿದೆ.

ಇತಿಹಾಸ ರಚನೆ ಕೈಚೆಲ್ಲಿದ ಭಾರತ

ಹರಿಣಗಳ ನಾಡಿನಲ್ಲಿ ಈ ಪಂದ್ಯ ಗೆಲ್ಲುವ ಮೂಲಕ ಐತಿಹಾಸಿಕ ಸರಣಿ ಗೆಲ್ಲುವ ವಿಶ್ವಾಸದಲ್ಲಿದ್ದ ಭಾರತಕ್ಕೆ ಜೋಹಾನ್ಸ್​ಬರ್ಗ್​ ಸೋಲು ಹಿನ್ನಡೆಯಾಗಿದೆ.

ಸಂಕ್ಷಿಪ್ತ ಸ್ಕೋರ್​ ಇಂತಿದೆ

ಭಾರತ ಮೊದಲ ಇನ್ನಿಂಗ್ಸ್​​ 202(63.1 ಓವರ್​)

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ 229(79.4 ಓವರ್​)

ಭಾರತ ಎರಡನೇ ಇನ್ನಿಂಗ್ಸ್​​ 266(60.1 ಓವರ್​)

ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್​​ 243/3(67.4 ಓವರ್​)

Last Updated : Jan 6, 2022, 10:29 PM IST

ABOUT THE AUTHOR

...view details