ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ): ಟೀಂ ಇಂಡಿಯಾ ನೀಡಿರುವ 240 ರನ್ಗಳ ಸುಲಭ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 118 ರನ್ಗಳಿಸಿದ್ದು, ಗೆಲುವಿಗೆ 122 ರನ್ಗಳ ಅಗತ್ಯವಿದೆ.
ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಲು ಭಾರತಕ್ಕೆ 8 ವಿಕೆಟ್ ಬೇಕಿದೆ. ಮತ್ತೊಂದೆಡೆ, 118 ರನ್ ಕಲೆ ಹಾಕಿದರೆ ದ.ಆಫ್ರಿಕಾ ಗೆದ್ದು ಬೀಗಲಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಚೇತೇಶ್ವರ್ ಪೂಜಾರಾ (53), ಅಂಜಿಕ್ಯ ರಹಾನೆ (58) ಹಾಗೂ ಹನುಮ ವಿಹಾರಿ (40*)ರನ್ಗಳ ನೆರವಿನಿಂದ 10 ವಿಕೆಟ್ ನಷ್ಟಕ್ಕೆ 266 ರನ್ ಗಳಿಗೆ ಆಲೌಟ್ ಆಗಿದ್ದು, ಈ ಮೂಲಕ ಎದುರಾಳಿ ತಂಡಕ್ಕೆ 240 ರನ್ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿರುವ ದ.ಆಫ್ರಿಕಾ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮರ್ಕ್ರಾಮ್(31) ಹಾಗೂ ಎಲ್ಗರ್(46*) ಉತ್ತಮ ಜೊತೆಯಾಟ ಆಡಿದರು. 31 ರನ್ ಗಳಿಕೆ ಮಾಡಿದ್ದ ವೇಳೆ ಶಾರ್ದೂಲ್ ಓವರ್ನಲ್ಲಿ ಮರ್ಕ್ರಾಮ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಪಿಟರ್ಸನ್ 28 ರನ್ಗಳಿಸಿ ಅಶ್ವಿನ್ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ಬ್ಯಾಟಿಂಗ್ ಕಾಯ್ದುಕೊಂಡಿರುವ ಎಲ್ಗರ್-ಡುಸ್ಸೆನ್
ದಕ್ಷಿಣ ಆಫ್ರಿಕಾ ಎರಡು ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ರಕ್ಷಣಾತ್ಮಕ ಆಟದ ಮೊರೆ ಹೋಗಿರುವ ಎಲ್ಗರ್-ಡುಸ್ಸೆನ್ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಜೇಯ 46 ರನ್ಗಳಿಕೆ ಮಾಡಿರುವ ಎಲ್ಗರ್ ಹಾಗೂ 11 ರನ್ ಗಳಿಸಿರುವ ಡುಸ್ಸೆನ್ ವಿಕೆಟ್ ಆದಷ್ಟು ಬೇಗ ಪಡೆದುಕೊಂಡರೆ ಮಾತ್ರ ಭಾರತ ಈ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿದೆ.