ಪಾರ್ಲ್(ದಕ್ಷಿಣ ಆಫ್ರಿಕಾ):ಅನೇಕ ಹೊಸ ಭರವಸೆಗಳೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತ ಕ್ರಿಕೆಟ್ ತಂಡಕ್ಕೆ ನಿರಾಸೆಯಾಗಿದೆ. ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಇದೀಗ ಏಕದಿನ ಸರಣಿಯಲ್ಲೂ 2-0 ಅಂತರದಿಂದ ಸೋಲು ಕಂಡಿದೆ.
ಪಾರ್ಲ್ ಮೈದಾನದಲ್ಲಿ ಇಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 288ರನ್ಗಳ ಗುರಿ ಬೆನ್ನತ್ತಿದ್ದ ಹರಿಣಗಳ ತಂಡ 48.1 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಜಯಸಿದೆ. ಈ ಮೂಲಕ ಕೋಚ್ ರಾಹುಲ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರಾಹುಲ್ಗೆ ನಿರಾಸೆಯಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ 31 ರನ್ಗಳ ಸೋಲು ಕಂಡಿದ್ದ ಭಾರತಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿತ್ತು. ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್-ರಾಹುಲ್ ತಂಡಕ್ಕೆ 63ರನ್ಗಳ ಜೊತೆಯಾಟವಾಡಿದರುು.
29ರನ್ಗಳಿಕೆ ಮಾಡಿದ್ದ ವೇಳೆ ಧವನ್ ಮಗಲಾ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಎರಡನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕಣಕ್ಕಿಳಿದ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕ್ಯಾಪ್ಟನ್ ರಾಹುಲ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕೆ ಬಂದ ಶ್ರೇಯಸ್ ಅಯ್ಯರ್ 11ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿರಿ:ಹರಿಣಗಳ ನಾಡಲ್ಲಿ ರಿಷಭ್ ಹೊಸ ದಾಖಲೆ.. 21 ವರ್ಷದ ನಂತರ ಕೋಚ್ ದ್ರಾವಿಡ್ ದಾಖಲೆ ಬ್ರೇಕ್!
ಕ್ಯಾಪ್ಟನ್ ರಾಹುಲ್ ಜೊತೆ ಸೇರಿದ ವಿಕೆಟ್ ಕೀಪರ್ ರಿಷಭ್ ಪಂತ್ ಎದುರಾಳಿ ಬೌಲರ್ಗಳನ್ನ ಚೆಂಡಾಡಿದರು. ಈ ಜೋಡಿ ತಂಡಕ್ಕೆ ಉತ್ತಮ ರನ್ ಕಾಣಿಕೆ ನೀಡುವ ಜೊತೆಗೆ ಅರ್ಧಶತಕ ಸಿಡಿಸಿ ಮಿಂಚಿದರು. 79 ಎಸೆತಗಳಲ್ಲಿ 55 ರನ್ ಗಳಿಕೆ ಮಾಡಿದ್ದ ರಾಹುಲ್ ಮಗಲಾ ಓವರ್ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಈ ಇವರಿಗೆ ಉತ್ತಮ ಸಾಥ್ ನೀಡಿದ ಪಂತ್ 71 ಎಸೆತಗಳಲ್ಲಿ 2 ಆಕರ್ಷಕ ಸಿಕ್ಸರ್, 10 ಬೌಂಡರಿ ಸೇರಿದಂತೆ 85 ರನ್ ಗಳಿಕೆ ಮಾಡಿ ಔಟಾದರು. ತದ ನಂತರ ವೆಂಕಟೇಶ್ ಅಯ್ಯರ್ 22ರನ್, ಶಾರ್ದೂಲ್ ಠಾಕೂರ್ ಅಜೇಯ 40ರನ್ ಹಾಗೂ ಅಶ್ವಿನ್ ಅಜೇಯ 25ರನ್ಗಳಿಕೆ ಮಾಡಿ ತಂಡ 6 ವಿಕೆಟ್ನಷ್ಟಕ್ಕೆ 287 ರನ್ ಗಳಿಕೆ ಮಾಡಲು ಸಹಾಯ ಮಾಡಿದರು.
ದಕ್ಷಿಣ ಆಫ್ರಿಕಾ ಪರ ಶಮ್ಸಿ 2 ವಿಕೆಟ್ ಪಡೆದುಕೊಂಡರೆ, ಮಗಲಾ, ಮರ್ಕ್ರಾಮ್, ಮಹಾರಾಜ್ ಹಾಗೂ ಪೆಹ್ಲಿಕೈ ತಲಾ 1 ವಿಕೆಟ್ ಪಡೆದುಕೊಂಡರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್:288 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಪ್ರಾರಂಭದಲ್ಲೇ ಸ್ಫೋಟಕ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಮಲನ್ ಹಾಗೂ ಡಿಕಾಕ್ ಜೋಡಿ 132ರನ್ಗಳ ಜೊತೆಯಾಟವಾಡಿದರು. 66 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 78 ರನ್ ಗಳಿಕೆ ಮಾಡಿದಾಗ ಡಿಕಾಕ್ ಠಾಕೂರ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬಳಿಕ ಬಂದ ಕ್ಯಾಪ್ಟನ್ ಬವೂಮ 35ರನ್ಗಳಿಕೆ ಮಾಡಿದರು.
ಶತಕ ವಂಚಿತರಾದ ಮಲನ್:ಭಾರತೀಯ ಬೌಲರ್ಗಳನ್ನ ಸುಲಭವಾಗಿ ಎದುರಿಸಿದ ಆರಂಭಿಕ ಬ್ಯಾಟರ್ ಮಲನ್ 1 ಸಿಕ್ಸರ್, 8 ಬೌಂಡರಿ ಸೇರಿದಂತೆ 91ರನ್ಗಳಿಕೆ ಮಾಡಿದರು. ಈ ವೇಳೆ ಬುಮ್ರಾ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕಣಕ್ಕಿಳಿದ ಮ್ಯಾರ್ಕ್ರಮ್ ಅಜೇಯ 37 ಹಾಗೂ ಡುಸ್ಸೆನ್ ಅಜೇಯ 37ರನ್ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಈ ಮೂಲಕ ಆತಿಥೇಯ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಗೆಲುವು ದಾಖಲು ಮಾಡಿ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.
ಭಾರತದ ಪರ ಜಸ್ಪ್ರೀತ್ ಬುಮ್ರಾ, ಚಹಲ್ ಹಾಗೂ ಠಾಕೂರ್ ತಲಾ 1 ವಿಕೆಟ್ ಪಡೆದುಕೊಂಡರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ