ತಿರುವನಂತಪುರಂ, ಕೇರಳ:ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಭಾರತ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಬೌಲರ್ಗಳ ಕಳಪೆ ಪ್ರದರ್ಶನದಿಂದ ಪಂದ್ಯಗಳನ್ನು ಕೈಚೆಲ್ಲಿತ್ತು. ಇದರಿಂದ ಭಾರತದ ಬೌಲಿಂಗ್ ವಿಭಾಗ ಟೀಕೆಗೂ ಗುರಿಯಾಗಿತ್ತು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಯ ಮೊದಲ ಪಂದ್ಯದಲ್ಲಿ ಬೌಲರ್ಗಳ ಸಾಹಸದಿಂದ ಭಾರತ 8 ವಿಕೆಟ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತ ಹರಿಣಗಳನ್ನು ನಿಗದಿತ 20 ಓವರ್ಗಳಲ್ಲಿ 106/8 ರನ್ಗಳಿಗೆ ಕಟ್ಟಿಹಾಕಿತು. ಭಾರತದ ಬೌಲರ್ಗಳ ಕರಾರುವಾಕ್ ದಾಳಿಗೆ ಸಾಕ್ಷಿಯಾಗಿದೆ. ಗುರಿ ಬೆನ್ನಟ್ಟಿದ ಭಾರತ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ವರ್ಕ್ ಆದ 3+ 2 ಫಾರ್ಮುಲಾ:ಆಸ್ಟ್ರೇಲಿಯಾ ವಿರುದ್ಧ ಅನುಭವಿ ವೇಗಿಗಳಾದ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ, ಉಮೇಶ್ ಯಾದವ್ ವಿಕೆಟ್ ಪಡೆಯಲು ತಿಣುಕಾಡಿದ್ದರು. ಅಲ್ಲದೇ 200 ರನ್ ಗಳಿಸಿದಾಗ್ಯೂ ಪಂದ್ಯವನ್ನು ಸೋತಿದ್ದರು. ಇದು ವಿಶ್ವಕಪ್ ಗೆಲ್ಲುವ ತಂಡದ ಮೇಲೆ ಕರಿಛಾಯೆ ಮೂಡಿಸಿತ್ತು. ಇಂದು ಕೇರಳದ ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಬೌಲರ್ಗಳು ಈ ಎಲ್ಲಾ ಟೀಕೆಗಳನ್ನು ಮೆಟ್ಟಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟರು.
7 ವಿಕೆಟ್ ಕೆಡವಿದ ವೇಗಿಗಳು:ಭುವನೇಶ್ವರ್, ಬೂಮ್ರಾ ವಿಶ್ರಾಂತಿಯಲ್ಲಿ ಸ್ಥಾನ ಪಡೆದಿರುವ ಯುವ ವೇಗಿಗಳಾದ ಅರ್ಷದೀಪ್ ಸಿಂಗ್, ದೀಪಕ್ ಚಹರ್ ಕರಾಮತ್ತು ತೋರಿದರು. ಇನ್ನೊಂದೆಡೆ ಆಸೀಸ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಹರ್ಷಲ್ ಪಟೇಲ್ ಕೂಡ 2 ವಿಕೆಟ್ ಪಡೆದು ಆತ್ಮವಿಶ್ವಾಸ ವೃದ್ಧಿಸಿಕೊಂಡರು.
ಬೂಮ್ರಾರ ಪ್ರತಿರೂಪದಂತೆ ದಾಳಿ ನಡೆಸಿದ ಅರ್ಷದೀಪ್ ಸಿಂಗ್ ಪ್ರಮುಖ 3 ವಿಕೆಟ್ ಕಿತ್ತರು. ದಾಳಿ ಹೇಗಿತ್ತೆಂದರೆ, ಮೇಲ್ಪಂಕ್ತಿ ಆಟಗಾರರಾದ ರಿಲೀ ರೊಸೊವ್, ಡೇವಿಡ್ ಮಿಲ್ಲರ್ನ್ನು ಸೊನ್ನೆಗೆ, ಕ್ವಿಂಟನ್ ಡಿ ಕಾಕ್ 1 ರನ್ಗೆ ಔಟ್ ಮಾಡಿ ಭಾರತಕ್ಕೆ ಅದ್ಭುತ ಆರಂಭ ನೀಡಿದರು. ಮತ್ತೊಂದು ತುದಿಯಲ್ಲಿ ಮಿಂಚಿನ ದಾಳಿ ಮಾಡಿದ ದೀಪಕ್ ಚಹರ್ ಕೂಡ 2 ವಿಕೆಟ್ ಕಿತ್ತು ಹರಿಣಗಳ ಬ್ಯಾಟಿಂಗ್ ಪುಡಿಗಟ್ಟಿದರು.