ಕೇಪ್ಟೌನ್(ದಕ್ಷಿಣ ಆಫ್ರಿಕಾ):ಹರಿಣಗಳ ವಿರುದ್ಧ ನಡೆದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-2 ಅಂತರದಿಂದ ಸೋಲು ಕಂಡಿರುವ ಟೀಂ ಇಂಡಿಯಾ ಇದೀಗ ಏಕದಿನ ಪಂದ್ಯಗಳಿಗಾಗಿ ಸಜ್ಜಾಗಿದೆ. ಪಾರ್ಲ್ನ ಬೋಲ್ಯಾಂಡ್ ಪಾರ್ಕ್ನಲ್ಲಿ ಮೊದಲ ಪಂದ್ಯ ನಡೆಯಲಿದೆ.
ನಿಗದಿತ ಓವರ್ಗಳ ಖಾಯಂ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಈ ಸರಣಿ ನಡೆಯುತ್ತಿರುವ ಕಾರಣ ತಂಡದ ನಾಯಕತ್ವ ಜವಾಬ್ದಾರಿ ಕನ್ನಡಿಗ ಕೆ.ಎಲ್.ರಾಹುಲ್ ಹೆಗಲಿಗೆ ಬಿದ್ದಿದ್ದು, ಉಪನಾಯಕವಾಗಿ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಅನುಭವಿಗಳಾಗಿರುವ ಶಿಖರ್ ಧವನ್ ಹಾಗೂ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಡದಲ್ಲಿ ಇರಲಿದ್ದಾರೆ.
ಅಭ್ಯಾಸದಲ್ಲಿ ನಿರತವಾದ ಟೀಂ ಇಂಡಿಯಾ ಪ್ಲೇಯರ್ಸ್ ಕ್ಯಾಪ್ಟನ್ ರಾಹುಲ್ಗೆ ಅಗ್ನಿಪರೀಕ್ಷೆ
ಏಕದಿನ ನಾಯಕನಾಗಿ ರಾಹುಲ್ ಇದೇ ಮೊದಲ ಸಲ ಸರಣಿವೊಂದರಲ್ಲಿ ತಂಡ ಮುನ್ನಡೆಸುತ್ತಿರುವ ಕಾರಣ ಅವರ ಮೇಲೆ ಅತಿದೊಡ್ಡ ಜವಾಬ್ದಾರಿ ಇದ್ದು, ಅಗ್ನಿಪರೀಕ್ಷೆಗೊಳಪಡಲಿದ್ದಾರೆ. ಜೊತೆಗೆ ಸರಣಿ ಗೆದ್ದು, ಹೊಸದೊಂದು ರೆಕಾರ್ಡ್ ಬರೆಯುವ ತವಕದಲ್ಲಿದ್ದಾರೆ.
ಇದನ್ನೂ ಓದಿ:ರಾಹುಲ್ ನಾಯಕತ್ವದಲ್ಲಿ 'ಕೇಳುಗ'ನಾದ ಮಾಜಿ ಕ್ಯಾಪ್ಟನ್ ವಿರಾಟ್: ಫೋಟೋಗಳಿವೆ ನೋಡಿ
ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಕೆಲ ಹೊಸ ಪ್ರತಿಭೆಗಳಿಗೆ ಮಹತ್ವ ಪಡೆದುಕೊಂಡಿದ್ದು, ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅಥವಾ ಋತುರಾಜ್ ಗಾಯಕ್ವಾಡ್ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ. ಶಿಖರ್ ಧವನ್ ಜೊತೆ ಆರಂಭಿಕರಾಗಿ ರಾಹುಲ್ ಕಣಕ್ಕಿಳಿಯುವ ಕಾರಣ ಋತುರಾಜ್ಗೆ ಅವಕಾಶ ಸಿಗುವುದು ಡೌಟ್ ಎನ್ನಲಾಗ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಅಯ್ಯರ್ಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಸುದ್ದಿಗೋಷ್ಠಿ ವೇಳೆ ರಾಹುಲ್ ಈ ಮಾತು ಖುದ್ದಾಗಿ ಹೇಳಿರುವ ಕಾರಣ ಅಯ್ಯರ್ ಆಡುವ 11ರ ಬಳಗದಲ್ಲಿ ಇರಲಿದ್ದಾರೆ.
ಸ್ಪಿನ್ನ ವಿಭಾಗದಲ್ಲಿ ಅಶ್ವಿನ್ ಜೊತೆಗೆ ಯಜುವೇಂದ್ರ ಚಹಲ್, ಜಯಂತ್ ಯಾದವ್ ಅವಕಾಶ ಪಡೆದುಕೊಂಡಿದ್ದು, ಚಹಲ್ ಜೊತೆಗೆ ಅಶ್ವಿನ್ 11ರ ಬಳಗದಲ್ಲಿ ಇರುವ ಸಾಧ್ಯತೆ ಇದೆ. ಇನ್ನು ವಿಕೆಟ್ ಕೀಪರ್ಗಳಾದ ರಿಷಭ್ ಪಂತ್ ಜೊತೆ ಇಶನ್ ಕಿಶನ್ ಸ್ಪರ್ಧೆಯಲ್ಲಿದ್ದಾರೆ. ಈಗಾಗಲೇ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಭರ್ಜರಿ ಶತಕ ಸಿಡಿಸಿರುವ ಕಾರಣ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ.
ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಇದೆ. ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಜೊತೆ ಸಿರಾಜ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಟೀಂ ಇಂಡಿಯಾ ಇಂತಿದೆ:ಕೆ.ಎಲ್.ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪ-ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ(ಭಾರತೀಯ ಕಾಲಮಾನ)