ಪಲ್ಲೆಕೆಲೆ (ಶ್ರೀಲಂಕಾ): ಕ್ರೀಡಾಭಿಮಾನಿಗಳ ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಾಳೆ ನಡೆಯುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ ಶ್ರೀಲಂಕಾದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆಯ ಪ್ರಕಾರ, ನಾಳೆ ಶೇ70ರಿಂದ 90 ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯ ನಡೆಯುವ ಸಂಭವ ಕಡಿಮೆ ಎನ್ನಲಾಗುತ್ತಿದೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿ ಆಗಿದ್ದವು. ಪಂದ್ಯದಲ್ಲಿ ವಿರಾಟ್ ಕೊಹ್ಲಿ 82 ರನ್‌ಗಳ ಏಕಾಂಗಿ ಆಟದಿಂದ ಪಾಕಿಸ್ತಾನ ನೀಡಿದ್ದ 160 ರನ್‌ಗಳ ಗುರಿಯನ್ನು 4 ವಿಕೆಟ್‌ಗಳಿಂದ ಭಾರತ ಗೆದ್ದು ಬೀಗಿತ್ತು. ಈ ಪಂದ್ಯದ ಮೂಲಕ ಎರಡು ವರ್ಷಗಳ ಕಾಲ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಲಯಕ್ಕೆ ಮರಳಿದ್ದರು. ಇದಾದ ನಂತರ ಸಾಂಪ್ರದಾಯಿಕ ಎದುರಾಳಿಗಳು ನಾಳೆ (ಸೆಪ್ಟೆಂಬರ್ 2) ಮತ್ತೆ ಎದುರಾಗುತ್ತಿದ್ದಾರೆ. ಹೀಗಾಗಿ ಪಂದ್ಯದ ರೋಚಕತೆ ಹೆಚ್ಚಾಗಿದೆ.
ಅಂಕಿಅಂಶಗಳ ಪ್ರಕಾರ, ಏಷ್ಯಾಕಪ್ನಲ್ಲಿ ಒಟ್ಟು 17 ಬಾರಿ ಉಭಯ ತಂಡಗಳು ಮುಖಾಮುಖಿ ಆಗಿದ್ದು, 9 ಬಾರಿ ಭಾರತ ಜಯಿಸಿದರೆ, ಪಾಕ್ 6 ಬಾರಿ ಗೆದ್ದಿದೆ. ಎರಡು ಪಂದ್ಯಗಳು ಫಲಿತಾಂಶರಹಿತವಾಗಿವೆ. ನಾಳಿನ ಪಂದ್ಯ ಮತ್ತೊಂದು ಫಲಿತಾಂಶರಹಿತ ಪಂದ್ಯವಾಗುತ್ತಾ ಎಂಬ ಅನುಮಾನ ಕಾಡುತ್ತಿದೆ. ಮಳೆಯಿಂದ ಪಂದ್ಯ ರದ್ದಾದಲ್ಲಿ ವಿಶ್ವದಾದ್ಯಂತ ಈ ಪಂದ್ಯಕ್ಕಾಗಿ ಕಾದಿರುವ ಅಭಿಮಾನಿಗಳ ನಿರೀಕ್ಷೆಗಳಿಗೆ ತಣ್ಣೀರೆರಚಿದಂತಾಗಲಿದೆ. ಶ್ರೀಲಂಕಾ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಪಂದ್ಯ ಆಡಿದ್ದು, ಇತ್ತಂಡಗಳು ತಲಾ ಒಂದೊಂದು ಗೆದ್ದುಕೊಂಡರೆ, ಒಂದು ಪಂದ್ಯ ಫಲಿತಾಂಶರಹಿತವಾಗಿದೆ.