ರಾಯ್‌ಪುರ (ಛತ್ತೀಸ್‌ಗಢ):ಇಲ್ಲಿಯ ಶಹೀದ್ ವೀರನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು (ಶನಿವಾರ) ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಹೀನಾಯ ಸೋಲನುಭವಿಸಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಕಿವೀಸ್ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಕೇವಲ 20.1 ಓವರ್ಗಳಿಗೆ 2 ವಿಕೆಟ್ ಕಳೆದುಕೊಂಡು 111 ರನ್ಗಳಿಸುವ ಮೂಲಕ 8 ವಿಕೆಟ್ಗಳ ಜಯ ದಾಖಲಿಸಿತು. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಇನ್ನು 1 ಪಂದ್ಯ ಬಾಕಿ ಇರುವಂತೆಯೇ ಜಯದ ಮಾಲೆಯನ್ನು ಧರಿಸಿದೆ. ಇತ್ತೀಚೆಗೆ ನಡೆದ ಮೊದಲ ಪಂದ್ಯದಲ್ಲಿ ಭಾರತ ಬ್ಯಾಟರ್ಗಳು ರನ್ ಮಳೆಯನ್ನೇ ಹರಿಸಿದ್ದರು. ಆದರೂ, ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಇಂದಿನ ಪಂದ್ಯವನ್ನು ಸಲೀಸಾಗಿ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತು.
ಭಾರತದ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ 50 ಎಸೆತದಲ್ಲಿ 7 ಬೌಂಡರಿ ಮತ್ತು 2 ಸಿಕ್ಸ್ ಒಳಗೊಂಡಂತೆ 51 ರನ್ ಗಳಿಸಿ ಗೆಲವಿನ ಹಾದಿಯನ್ನು ಸುಗಮಗೊಳಿಸಿದರು. ರೋಹಿತ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್ಗೆ ಇಳಿದ ವಿರಾಟ್ ಕೊಹ್ಲಿ (11) ಯುವ ಆಟಗಾರ ಶುಭ್ಮನ್ ಗಿಲ್ಗೆ ಜೊತೆಯಾದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಶುಭ್ಮನ್ ಗಿಲ್ ಔಟ್ ಆಗದೇ 40 (53) ಮತ್ತು ಇಶಾನ್ ಕಿಶನ್ 8 (9) ರನ್ ಗಳಿಸುವ ಮೂಲಕ ತಂಡದ ಗೆಲುವನ್ನು ಸಲೀಸಾಗಿ ಡದಕ್ಕೆ ತಂದರು. ನ್ಯೂಜಿಲೆಂಡ್ ಪರ ಹೆನ್ರಿ ಶಿಪ್ಲಿ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್ ಕಿತ್ತರು.
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿದ ನಾಯಕ ರೋಹಿತ್ ಶರ್ಮಾ, ಮೊದಲ ಪಂದ್ಯದ ಬಳಗವನ್ನೇ ಮುಂದುವರಿಸಿದ್ದರು. ಟಾಮ್ ಲ್ಯಾಥಮ್ ನೇತೃತ್ವದ ನ್ಯೂಜಿಲೆಂಡ್ ಆಟಗಾರರನ್ನು ಆರಂಭದಿಂದಲೂ ಇನ್ನಿಲ್ಲದಂತೆ ಕಾಡಿದ ಭಾರತದ ವೇಗಿಗಳು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶ ಕಂಡರು. 34.2 ಓವರ್‌ಗಳಲ್ಲಿ ಕೇವಲ 108 ರನ್‌ಗಳನ್ನು ನೀಡಿ ಸರ್ವಪತನ ಕಂಡ ಕಿವೀಸ್ ತಂಡ, ಭಾರತಕ್ಕೆ 109 ರನ್‌ಗಳ ಗುರಿ ನೀಡಿತ್ತು. ವೇಗಿ ಮೊಹಮ್ಮದ್ ಶಮಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದು, ತಮ್ಮ 6 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಮೂರು ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಮುಳುವಾದರು. ಶುರುವಿನಿಂದಲೂ ಹಿನ್ನಡೆ ಅನುಭವಿಸುತ್ತಿದ್ದ ಕಿವೀಸ್, ಕೊನೆವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.