ರಾಂಚಿ(ಜಾರ್ಖಂಡ್): ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ನಂತರ ಇಂದಿನಿಂದ ಆರಂಭವಾಗಲಿರುವ ಚುಟುಕು ಸಮರಕ್ಕೆ ಹಾರ್ದಿಕ್ ನಾಯಕತ್ವದಲ್ಲಿ ಯುವ ಪಡೆ ಸಜ್ಜಾಗಿದೆ. ಮಾಜಿ ನಾಯಕ ಧೋನಿ ತವರಿನಲ್ಲಿ ಪಂದ್ಯ ನಡೆಯುತ್ತಿದ್ದು, ಕುತೂಹಲ ಹೆಚ್ಚಾಗಿದೆ. ಪಿಚ್ ಇತಿಹಾಸದಲ್ಲಿ ಭಾರತ ಇದುವರೆಗೂ ಸೋಲು ಕಂಡಿಲ್ಲ. ಕೊನೆಯ ಅಂತಾರಾಷ್ಟ್ರೀಯ ಚುಟುಕು ಸಮರ ಕಿವೀಸ್ ವಿರುದ್ಧವೇ ಭಾರತ ಈ ಪಿಚ್ನಲ್ಲಿ ಗೆಲುವು ಸಾಧಿಸಿದೆ.
ಹಾರ್ದಿಕ್ ನಾಯಕತ್ವದಲ್ಲಿ ಸೀಮಿತ ಓವರ್ನ ಪಂದ್ಯದಲ್ಲಿ ಭಾರತ ಯಶಸ್ಸು ಕಾಣುತ್ತಿದ್ದು, ಯುವ ಪಡೆಯನ್ನು ಐಪಿಎಲ್ ಚಾಂಪಿಯನ್ ತಂಡ ಮುನ್ನಡೆಸಿದ ಅನುಭವದಲ್ಲೇ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ಎದುರು ಸರಣಿಗೆದ್ದಿರುವ ಹಾರ್ದಿಕ್ ಮೇಲೆ ಭರವಸೆಯೂ ಹೆಚ್ಚಿದೆ. ಏಕದಿನ ವಿಶ್ವಕಪ್ ಹಿನ್ನೆಲೆ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಕೈಬಿಡಲಾಗಿದೆ. ಟಿ-20ಗಾಗಿ ಹಾರ್ದಿಕ್ ನಾಯಕತ್ವದಲ್ಲಿ ಇಶನ್ ಕಿಶನ್, ಗಿಲ್, ಸೂರ್ಯಕುಮಾರ್ ಯಾದವ್ ಒಳಗೊಂಡ ಯುವ ಪಡೆಯನ್ನು ರಚಿಸಲಾಗಿದೆ.
ಇನ್ನಿಂಗ್ಸ್ ಆಂಭಿಸಲಿರುವ ಗಿಲ್ ಮತ್ತು ಕಿಶನ್: ಲಂಕಾ ಎದುರಿನ ಸರಣಿಗೆ ಆಯ್ಕೆ ಆಗಿದ್ದ ಋತುರಾಜ್ ಗಾಯಕ್ವಾಡ್ ಮುಂಗೈ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದಾರೆ. ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪೃಥ್ವಿ ಶಾ ಅವಕಾಶ ಮಾಡಿಕೊಡಲಾಗಿದೆ. ಆದರೆ, ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದನ್ನು ನಾಯಕ ಈಗಾಗಲೇ ಹೇಳಿದ್ದಾರೆ. ಗಿಲ್ ಮತ್ತು ಕಿಶನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬುದನ್ನೂ ತಿಳಿಸಿದ್ದಾರೆ.
ಚೊಚ್ಚಲ ಪಂದ್ಯ ಆಡುವ ನಿರೀಕ್ಷೆಯಲ್ಲಿ ಜಿತೇಶ್ ಶರ್ಮಾ ಇದ್ದಾರೆ. ಆಲ್ರೌಂಡರ್ ಸ್ಥಾನಕ್ಕಾಗಿ ನಾಯಕ ಹಾರ್ದಿಕ್ ಜೊತೆಗೆ ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ಇದ್ದು ಅವಕಾಶ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡ ಬೇಕಿದೆ. ಅರ್ಷದೀಪ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಕೇಶ್ ಕುಮಾರ್ ಬೌಲಿಂಗ್ ಪಡೆಯಲ್ಲಿದ್ದಾರೆ.
ಶುಭಕೋರಿದ ಮಾಹಿ: 25ರಂದು 20ಟಿ ತಂಡ ರಾಂಚಿಯನ್ನು ತಲುಪಿತ್ತು. ಅಭ್ಯಾಸ ನಡೆಸುತ್ತಿದ್ದ ತಂಡವನ್ನು ಭೇಟಿ ಮಾಡಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಆಟಗಾರಿಗೆ ಸಲಹೆ ನೀಡಿದ್ದಾರೆ. ಇಶಾನ್ ಕಿಶನ್ ಕೂಡ ಧೋನಿ ಜೊತೆ ಮಾತನಾಡಿದ್ದಾರೆ. ಧೋನಿ ಎಲ್ಲಾ ಆಟಗಾರರಿಗೂ ಶುಭಾಶಯ ತಿಳಿಸಿದ್ದಾರೆ.