ಮುಂಬೈ(ಮಹಾರಾಷ್ಟ್ರ):2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಇಂದು ಭಾರತ-ನ್ಯೂಜಿಲೆಂಡ್ ತಂಡಗಳು ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಲಿವೆ. ಹೈವೋಲ್ಟೇಜ್ ಪಂದ್ಯ ಇದಾಗಿರಲಿದ್ದು ಉಭಯ ತಂಡಗಳು ಗೆಲುವಿನ ಮಂತ್ರವನ್ನೇ ಜಪಿಸುತ್ತಿವೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ.
2019ರ ವಿಶ್ವಕಪ್ನ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತವು ಸೋಲುಂಡಿತ್ತು. ವಿಶ್ವಕಪ್ 2023ರ ಗುಂಪು ಹಂತದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಭಾರತ ಸೇಡು ತೀರಿಸಿಕೊಂಡಿತು. ಮುಯ್ಯಿಗೆ ಮುಯ್ಯೆಂಬಂತೆ ಉಭಯ ತಂಡಗಳು ಸದ್ಯ ಗೆಲುವಿನ ಲೆಕ್ಕಾಚಾರದಲ್ಲಿವೆ.
ರೋಹಿತ್ ಶರ್ಮಾ ಮುಂದಾಳತ್ವದ ಭಾರತ ಗುಂಪು ಹಂತದಲ್ಲಿ ಎಲ್ಲ 9 ಪಂದ್ಯಗಳನ್ನೂ ಗೆದ್ದರೆ, ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ 5 ಪಂದ್ಯ ಗೆದ್ದು 4 ಅನ್ನು ಕೈಚೆಲ್ಲಿದೆ. ಈ ಸಾಲಿನ ಅಭಿಯಾನದಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಸರ್ವಶ್ರೇಷ್ಠ ಸಾಲಿನಲ್ಲಿರುವ ರೋಹಿತ್ ಶರ್ಮಾ ಬಳಗಕ್ಕೆ ಇಂದಿನ ಪಂದ್ಯ ಅಗ್ನಿಪರೀಕ್ಷೆಯಾಗಿದೆ. ಉತ್ತಮ ಫಾರ್ಮ್ನಲ್ಲಿರುವ ತಂಡದ ಆಟಗಾರರು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ವಿರಾಟ್ 50ನೇ ಶತಕಕ್ಕಾಗಿ ಕ್ರಿಕೆಟ್ ಲೋಕ ಕಾದು ಕುಳಿತಿದೆ.
ಮತ್ತೊಂಡೆದೆ, ಕಿವೀಸ್ ಕೂಡ ಉತ್ತಮ ಲಯದಲ್ಲಿದೆ. ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ತಂಡದ ಬೌಲರ್ಗಳು ಎದುರಾಳಿಗಳನ್ನು ಹೆಚ್ಚು ಕಾಡಬಲ್ಲರು. ಡೆವೊನ್ ಕಾನ್ವೆ, ರಚಿನ್ ರವೀಂದ್ರ ತಮ್ಮ ಬ್ಯಾಟಿಂಗ್ನಿಂದ ಹೆಚ್ಚು ರನ್ ಗಳಿಸಬಲ್ಲರು.