ನವೆಂಬರ್ 25 ರಿಂದ ಭಾರತ (Team India) ಮತ್ತು ನ್ಯೂಜಿಲ್ಯಾಂಡ್ ಎರಡು ಟೆಸ್ಟ್ (India vs New Zealand) ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಏತನ್ಮಧ್ಯೆ, ಈ ಸರಣಿಗೆ ಟೆಸ್ಟ್ ಆಟಗಾರ ಹನುಮ ವಿಹಾರಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದು, ಇದಕ್ಕೆ ಕಾರಣ ಏನು ಎಂದು ಕೇಳಲಾಗಿತ್ತು. ಈ ಬಗ್ಗೆ ಆಯ್ಕೆ ಸಮಿತಿ ಸೇರಿದಂತೆ ಹಲವರು ಮೌನ ವಹಿಸಿದ್ದರು. ವಿಹಾರಿಯನ್ನು ಏಕೆ ಆಯ್ಕೆ ಮಾಡಲಾಗಲಿಲ್ಲ ಎಂಬುದರ ಬಗ್ಗೆ ಟೀಂ ಇಂಡಿಯಾದ ದಂತಕಥೆ ಸುನಿಲ್ ಗವಾಸ್ಕರ್ (Sunil Gavaskar) ಬಹಿರಂಗಪಡಿಸಿದ್ದಾರೆ.
ಸ್ಪೋರ್ಟ್ಸ್ ಟಾಕ್ ಜೊತೆ ಮಾತನಾಡಿರುವ ಅವರು, ಹನುಮ ವಿಹಾರಿ (Hanuma Vihari) ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗದ್ದು ನನಗೆ ಆಶ್ಚರ್ಯ ತಂದಿಲ್ಲ. ಕಾರಣ ಕಳೆದ ಕೆಲವು ತಿಂಗಳುಗಳಿಂದ ಅವರು ಕ್ರಿಕೆಟ್ ಮೈದಾನದಿಂದ ದೂರವೇ ಉಳಿಸಿದ್ದಾರೆ. ಎಲ್ಲಿಯೂ ಹೆಚ್ಚು ಕಾಣಿಸಿಕೊಂಡಿಲ್ಲ. ಐಪಿಎಲ್‌ನಲ್ಲೂ ಆಡಿರಲಿಲ್ಲ.
ಇದು ಸೇರಿದಂತೆ ಕಳೆದ ಮೂರ್ನಾಲ್ಕು ತಿಂಗಳಿಂದ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿಯೂ ಆಡಿಲ್ಲ. ಈ ಮಾನದಂಡದಿಂದ ಅವರನ್ನು ಕೈಬಿಟ್ಟಿರಬಹುದು. ಅದಾಗಿಯೂ ಮುಂಬರುವ ದಿನಗಳ ಸರಣಿ ಹಿನ್ನೆಲೆ ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾ ಪ್ರವಾಸ (South Africa tour) ಕೈಗೊಳ್ಳಲಿರುವ ಭಾರತ 'ಎ' ತಂಡಕ್ಕೆ ಸೇರಿಸಿಕೊಂಡಿದೆ ಎಂದರು.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಹನುಮ ವಿಹಾರಿ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ವ್ಯಾಪಕ ಟೀಕೆಗಳು ಹರಿದು ಬಂದಿದ್ದವು.
ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಪಂದ್ಯ:
ನ್ಯೂಜಿಲ್ಯಾಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಕಾನ್ಪುರದಲ್ಲಿ ನವೆಂಬರ್ 25ರಂದು ಆರಂಭವಾಗಲಿದೆ. ಇನ್ನು ಎರಡನೇ ಪಂದ್ಯ ಡಿಸೆಂಬರ್ 3ರಿಂದ ಮುಂಬೈನಲ್ಲಿ ನಡೆಯಲಿದೆ. ಅನುಭವಿ ಆಟಗಾರ ಅಜಿಂಕ್ಯ ರಹಾನೆ ಮೊದಲ ಟೆಸ್ಟ್ ಪಂದ್ಯದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಎರಡನೇ ಟೆಸ್ಟ್ (second Test) ಪಂದ್ಯಕ್ಕೆ ರನ್ ಮಿಷನ್ ವಿರಾಟ್ ಕೊಹ್ಲಿ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ.