ಜೈಪುರ (ರಾಜಸ್ಥಾನ):ಭಾನುವಾರದಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಟಿ20 ಸರಣಿಯಿಂದ ನ್ಯೂಜಿಲ್ಯಾಂಡ್ ತಂಡದ ವೇಗಿ ಕೈಲ್ ಜೇಮಿಸನ್ ಹೊರಬಂದಿದ್ದಾರೆ. ಅವರು ಟೆಸ್ಟ್ ತಂಡಕ್ಕೆ ಸಿದ್ಧತೆ ಮಾಡಿಕೊಳ್ಳುವ ದೃಷ್ಟಿಯಿಂದ 3 ಪಂದ್ಯಗಳ ಚುಟುಕು ಸರಣಿಯಿಂದ ಹಿಂದೆ ಸರಿದಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ರನ್ನರ್ ಅಪ್ ಆಗಿರುವ ನ್ಯೂಜಿಲ್ಯಾಂಡ್ ಆಟಗಾರರು ವಿಶ್ವಕಪ್ನಲ್ಲಿ ಸತತ ಪಂದ್ಯಗಳನ್ನಾಡಿ ದಣಿದಿದ್ದರು. ಹೀಗಾಗಿ, ನಾಯಕ ಕೇನ್ ವಿಲಿಯಮ್ಸನ್ ಮೊದಲು ಟಿ20 ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದರು. ಇದೀಗ ವಿಶ್ವಕಪ್ನಲ್ಲಿ ಒಂದೂ ಪಂದ್ಯವನ್ನಾಡದ ಕೈಲ್ ಜೇಮಿಸನ್ ಕೂಡ ಟೆಸ್ಟ್ ಸರಣಿಗೆ ಮಹತ್ವ ನೀಡಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಿವೀಸ್ ಕೋಚ್ ಗ್ಯಾರಿ ಸ್ಟೀಡ್, "ಕೇನ್ (ವಿಲಿಯಮ್ಸನ್) ಹಾಗೂ ಕೈಲ್ (ಜೇಮಿಸನ್) ಅವರ ಬಳಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದೇವೆ. ಅವರಿಬ್ಬರೂ ಟಿ20 ಸರಣಿಯಲ್ಲಿ ಆಡುವುದಿಲ್ಲ. ಅವರಿಬ್ಬರೂ ಭಾರತ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಸಜ್ಜಾಗಲಿದ್ದಾರೆ. ನಾವೆಲ್ಲರೂ ಅವರನ್ನು ಸಂಪೂರ್ಣ ಟೆಸ್ಟ್ ಸರಣಿಯಲ್ಲಿ ನೋಡಬಹುದು ಎಂದು ಭಾವಿಸುತ್ತೇನೆ " ಎಂದು ತಿಳಿಸಿದರು.