ಅಹಮದಾಬಾದ್ (ಗುಜರಾತ್):ಶುಭಮನ್ ಗಿಲ್ ಅವರ ಶತಕ ಮತ್ತು ನಾಯಕ ಹಾರ್ದಿಕ್ ಪಾಂಡ್ಯರ ಬೌಲಿಂಗ್ಗೆ ಮಣಿದ ಕಿವೀಸ್ 2-1ರಿಂದ ಸರಣಿ ಸೋಲು ಅನುಭವಿಸಿದೆ. ಭಾರತ ನೀಡಿದ್ದ 235 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ಪಡೆ ಭಾರತೀಯರ ಮಾರಕ ಬೌಲಿಂಗ್ಗೆ 12.1 ಓವರ್ಗೆ 66 ರನ್‌ಗಳಿಗೆ ಆಲೌಟಾಯಿತು. 168 ರನ್ಗಳ ಅಂತರದಲ್ಲಿ ಟಿ20ಯಲ್ಲಿ ಭಾರತಕ್ಕೆ ಇದುವರೆಗಿನ ಅತಿದೊಡ್ಡ ಗೆಲುವು ಸಿಕ್ಕಿತು. ಈ ಮೂಲಕ ತವರಿನಲ್ಲಿ ಸರಣಿ ಗೆಲುವಿನ ಪರ್ವ ಮುಂದುವರೆಸಿತು.
ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಗಿಲ್ ಅವರ ಅದ್ಭುತ ಶತಕದ ನೆರವಿನಿಂದ ಭಾರತ 234 ರನ್ ಗಳಿಸಿತು. ಮೆನ್ ಇನ್ ಬ್ಲೂ ನೀಡಿದ್ದ ಗುರಿ ಬೆನ್ನತ್ತಿದ ಕಿವೀಸ್ಗೆ ಆರಂಭದ ಓವರ್ನಲ್ಲೇ ನಾಯಕ ಹಾರ್ದಿಕ್, ಫಿನ್ ಅಲೆನ್ (3) ವಿಕೆಟ್ ಪಡೆದು ಶಾಕ್ ನೀಡಿದರು. ಇದರ ಬೆನ್ನಲ್ಲೇ ಅರ್ಷದೀಪ್ ಅವರ ಎರಡನೇ ಓವರ್ನಲ್ಲಿ ನ್ಯೂಜಿಲೆಂಡ್ ಎರಡು ವಿಕೆಟ್ ನಷ್ಟ ಅನುಭವಿಸಿತು. ಡೆವೊನ್ ಕಾನ್ವೇ 1 ರನ್ಗೆ ಔಟಾದ್ರೆ ಮಾರ್ಕ್ ಚಾಪ್ಮನ್ ಖಾತೆ ತೆರೆಯದೇ ಡಕ್ ಆದರು.
ಮೂರನೇ ಓವರ್ಗೆ ಮತ್ತೆ ಬಂದ ಹಾರ್ದಿಕ್ ನಾಲ್ಕನೇಯವರಾಗಿ ಕಣಕ್ಕಿಳಿದಿದ್ದ ಗ್ಲೆನ್ ಫಿಲಿಪ್ಸ್ (2)ರನ್ನು ಪೆವಿಲಿಯನ್ಗೆ ಕಳಿಸಿದರು. ನಂತರ ಮೈಕೆಲ್ ಬ್ರೇಸ್ವೆಲ್ ಉಮ್ರಾನ್ ಮಲಿಕ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕಿವೀಸ್ ಪಡೆ 5 ಓವರ್ಗೆ ಐದು ವಿಕೆಟ್ ನಷ್ಟ ಅನುಭವಿಸಿ 22 ರನ್ ಮಾತ್ರ ಗಳಿಸಿತು. ನಾಯಕ ಸ್ಯಾಂಟ್ನರ್ ಮತ್ತು ಡೇರಿಲ್ ಮಿಚೆಲ್ ಕಿವೀಸ್ಗೆ ಕೊಂಚ ಚೇತರಿಕೆ ನೀಡಿದರು. ಶಿವಂ ಮಾವಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಗಳಿಸಿ ಸ್ಯಾಂಟ್ನರ್(13) ಮತ್ತು ಸೋಧಿ (0) ಪೆವಿಲಿಯನ್ ಸೇರಿಸಿದರು.
ನಂತರ ಬಂದ ಲಾಕಿ ಫರ್ಗುಸನ್ (0) ಮತ್ತು ಬ್ಲೇರ್ ಟಿಕ್ನರ್ ಕೂಡ ಬೇಗ ಔಟಾದರು. ಕೊನೆಯವರೆಗೂ ಹೋರಾಡಿದ ಡೇರಿಲ್ ಮಿಚೆಲ್ 35 ರನ್ಗಳಿಸಿದರು. ಭಾರತ್ ಪರ ನಾಯಕ ಹಾರ್ದಿಕ್ ಪಾಂಡ್ಯ 4 ವಿಕೆಟ್ ಮತ್ತು ಅರ್ಷದೀಪ್, ಉಮ್ರಾನ್ ಮಲಿಕ್ ಹಾಗೂ ಶಿವಂ ಮಾವಿ ತಲಾ ಎರಡು ವಿಕೆಟ್ ಪಡೆದರು.
ಭಾರತಕ್ಕೆ ಆರಂಭಿಕ ಆಘಾತ:ಆರಂಭಿಕ ಇಶನ್ ಕಿಶನ್ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಮತ್ತೆ ವಿಫಲರಾದರು. 1 ರನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಕಿಶನ್ ನಂತರ ಬಂದ ತ್ರಿಪಾಠಿ ಆರಂಭಿಕ ಗಿಲ್ ಅವರೊಂದಿಗೆ 50 ರನ್ಗಳ ಉತ್ತಮ ಜೊತೆಯಾಟ ನೀಡಿದರು. ಮೂರನೇ ಪಂದ್ಯದಲ್ಲಿ ಲಯಕ್ಕೆ ಬಂದ ತ್ರಿಪಾಠಿ ಬಿರುಸಿನ ಆಟ ಪ್ರದರ್ಶಿಸಿ, ಕೇವಲ 22 ಎಸೆತದಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ನಿಂದ 44 ರನ್ಗಳಿಸಿದರು. ನಾಲ್ಕನೇ ಸ್ಲಾಟ್ನಲ್ಲಿ ಬಂದ ಟಿ20 ಅಗ್ರ ರ್‍ಯಾಂಕರ್ ಸೂರ್ಯಕುಮಾರ್ ಯಾದವ್ ತಂಡಕ್ಕೆ 24 ರನ್ಗಳ ಕೊಡುಗೆ ನೀಡಿದರು. ಗಿಲ್ಗೆ ಸಾಥ್ ನೀಡಿದ ನಾಯಕ ಹಾರ್ದಿಕ್ 30 ರನ್ಗಳಿಸಿ ಔಟ್ ಆದರು.
ವಿರಾಟ್ ದಾಖಲೆ ಮುರಿದ ಗಿಲ್ :ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದ ಗಿಲ್ ಅಂತರಾಷ್ಟ್ರೀಯ ಟಿ20ಯ ಎರಡನೇ ಶತಕ ಪೂರೈಸಿದರು. 54 ಬಾಲ್ಗಳಲ್ಲಿ ನೂರು ರನ್ ಗಳಿಸಿದ ಗಿಲ್ ಮೂರು ವಿಭಾಗದಲ್ಲಿ ಶತಕ ಗಳಿಸಿದ ಭಾರತೀಯರ ಪಟ್ಟಿಗೆ ಸೇರ್ಪಡೆಯಾದರು. ನ್ಯೂಜಿಲೆಂಡ್ ವಿರುದ್ಧ ವೈಯುಕ್ತಿಕ ಏಕದಿನದಲ್ಲಿ (208) ಮತ್ತು ಟಿ20 (126) ಅತೀ ಹೆಚ್ಚು ರನ್ಗಳಿಸಿದ ದಾಖಲೆ ಬರೆದರು. ಶುಭಮನ್ 123 ರನ್ ದಾಟುತ್ತಿದ್ದಂತೆ ಭಾರತೀಯರಲ್ಲಿ ವೈಯುಕ್ತಿಕ ಅತೀ ಹೆಚ್ಚು ರನ್ಗಳಿಸ ಬ್ಯಾಟರ್ಗಳ ಪಟ್ಟಿ ಸೇರಿದರು. 122 ರನ್ಗಳಿಸಿ ಮೊದಲ ಸ್ಥಾನದಲ್ಲಿದ್ದ ವಿರಾಟ್ರನ್ನು ಕೆಳಗೆ ತಳ್ಳಿ ಅಗ್ರ ಸ್ಥಾನ ಗಳಿಸಿದರು ಮತ್ತು ಮೂರನೇಯವರಾಗಿ ರೋಹಿತ್ ಶರ್ಮಾ (118) ಇದ್ದಾರೆ.
ಕಿವೀಸ್ ಪರ ಮೈಕೆಲ್ ಬ್ರೇಸ್ವೆಲ್, ಬ್ಲೇರ್ ಟಿಕ್ನರ್, ಇಶ್ ಸೋಧಿ ಮತ್ತು ಡೇರಿಲ್ ಮಿಚೆಲ್ ತಲಾ ಒಂದು ವಿಕೆಟ್ ಪಡೆದರು. ಇಶ್ ಸೋಧಿ ತ್ರಿಪಾಠಿಯನ್ನು ಔಟ್ ಮಾಡುವ ಮೂಲಕ ಭಾರತ ವಿರುದ್ಧ ಒಟ್ಟು 25 ವಿಕೆಟ್ ಉರುಳಿಸಿದರು. ಈ ಮೂಲಕ ಎದುರಾಳಿ ದೇಶದ ವಿರುದ್ಧ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಮೂರನೇ ಸ್ಥಾನ ಗಳಿಸಿದರು. ರಶೀದ್ ಖಾನ್ ಐರ್ಲೆಂಡ್ ವಿರುದ್ಧ 37 ಮತ್ತು ಸೌಥಿ ಪಾಕಿಸ್ತಾನದ ಎದುರು 28 ವಿಕೆಟ್ ಪಡೆದು ಮೊದಲೆರಡು ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಭಾರತ-ನ್ಯೂಜಿಲೆಂಡ್ ಟಿ20 ಫೈಟ್: ಅಂತಿಮ ಪಂದ್ಯದಲ್ಲಿ ಭಾರತ ಬ್ಯಾಟಿಂಗ್, ಸರಣಿ ಯಾರಿಗೆ?