ಲಖನೌ(ಉತ್ತರ ಪ್ರದೇಶ):ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲ್ಯಾಂಡ್ ಹಾರ್ದಿಕ್ ಪಡೆಗೆ 100 ರನ್ ಗೆಲುವಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಬ್ಲ್ಯಾಕ್ ಕ್ಯಾಪ್ಸ್ನ ಬೌಲರ್ಗಳು ಕಾಡಿದರು. 4 ವಿಕೆಟ್ ಕಳೆದು ಕೊಂಡ ಭಾರತ ಕೊನೆಯ ಒಂದು ಬಾಲ್ ಉಳಿಸಿಕೊಂಡು ಪಂದ್ಯದಲ್ಲಿ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ಅನ್ನು ಭಾರತದ ಬೌಲರ್ಗಳು 99 ರನ್ಗೆ ಕಟ್ಟಿ ಹಾಕಿದ್ದರು. ಈ ಗುರಿಯನ್ನು ಬೆನ್ನು ಹತ್ತಿದ ಬ್ಲೂ ಬಾಯ್ಸ್ನ ದ್ವಿಶತಕ ವೀರ ಆರಂಭಿಕ ಗಿಲ್ (11) ಬೇಗ ವಿಕೆಟ್ ಒಪ್ಪಿಸಿದರು. ಕಿಶನ್ (19) ಅವಸರದ ರನ್ ಗಳಿಸಲು ಹೋಗಿ ತಂಡ ಸುಸ್ಥಿತಿಯಲ್ಲಿದ್ದಾಗ ರನ್ ಔಟ್ ಆದರು. ನಂತರ ಬಂದ ತ್ರಿಪಾಠಿ(13) ಹೆಚ್ಚು ಹೊತ್ತು ಕ್ರೀಸ್ನಲಲ್ಲಿ ನಿಲ್ಲಲಿಲ್ಲ.
ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಸುಂದರ್ಗೆ ನಾಯಕ ಹಾರ್ದಿಕ್ ಬಡ್ತಿ ನೀಡಿದರು. ಸೂರ್ಯಕುಮಾರ್ ಯಾದವ್ ಜೊತೆಗೆ ಸುಂದರ್ ಇನ್ನಿಂಗ್ಸ್ ಕಟ್ಟುತ್ತಿದ್ದರು. ಈ ವೇಳೆ ಅನಗತ್ಯ ರನ್ ಕದಿಯಲು ಇಳಿದ ವಾಷಿಂಗ್ಟನ್ ಸುಂದರ್(10) ಸಹ ರನ್ ಔಟ್ಗೆ ಪೆವಿಲಿಯನ್ ದಾರಿ ಹಿಡಿದರು. ನಂತರ ಬಂದ ನಾಯಕ ಹಾರ್ದಿಕ್ ಉಪನಾಯಕ ಸೂರ್ಯನ ಜೊತೆಗೆ ಸೇರಿ ತಂಡವನ್ನು ಗೆಲುವಿಗೆ ತಂದರು. ಕೊನೆಯ ಓವರ್ನಲ್ಲಿ ಭಾರತದ ಗೆಲುವಿಗೆ ಆರು ಬಾಲ್ಗೆ 6 ರನ್ ಬೇಕಾಗಿದ್ದು, ಕೊನೆಯ ಒಂದು ಚೆಂಡನ್ನು ಉಳಿಸಿಕೊಂಡು ಭಾರತ ಗೆಲುವು ಸಾಧಿಸಿತು. ಸೂರ್ಯ ಕುಮಾರ್ ಯಾದವ್ 26 ರನ್ ಮತ್ತು ಹಾರ್ದಿಕ್ 15 ರನ್ ಗಳಿಸಿ ಅಜೇಯರಾಗಿ ಉಳಿದರು.