ಹೈದರಾಬಾದ್:ಮುಂಬರುವ ಏಕದಿನ ಕ್ರಿಕೆಟ್ ವಿಶ್ವಕಪ್ ತಯಾರಿಯ ಹಂತವಾಗಿ ಇಂದಿನಿಂದ ಭಾರತ - ನ್ಯೂಜಿಲ್ಯಾಂಡ್ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಿದೆ. ಮೊದಲ ಪಂದ್ಯ ಇಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು.
ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಇದೇ ಉತ್ಸಾಹದಲ್ಲಿರುವ ಬ್ಲೂ ಬಾಯ್ಸ್, ಕಿವೀಸ್ ಸವಾಲು ಎದುರಿಸಲು ಸಿದ್ಧವಾಗಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿರುವ ಟೀಂ ಇಂಡಿಯಾ ಕೆಲವು ಬದಲಾವಣೆ ಮಾಡಿಕೊಂಡಿದೆ. ಬೆನ್ನು ನೋವಿನಿಂದಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್ ಸರಣಿಯ ಮೂರು ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ಅವರ ಸ್ಥಾನವನ್ನು ರಜತ್ ಪಾಟೀದಾರ್ ತುಂಬಿದ್ದಾರೆ.
ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ತೋರಿದ ವೇಗಿಗಳಾದ ಮೊಹಮ್ಮದ್ ಸಿರಾಜ್, ಶಮಿ, ಶಾರ್ದೂಲ್ ಠಾಕೂರ್ ಅದೇ ಹುಮ್ಮಸ್ಸಿನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ತಂಡದಲ್ಲಿದ್ದಾರೆ. ಸ್ಪಿನ್ ದಾಳಿಗೆ ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಎದುರಾಳಿ ಕಿವೀಸ್ ಕೂಡ ಕೆಲವು ಬದಲಾವಣೆ ಮಾಡಿಕೊಂಡಿದೆ. ಪ್ರಮುಖ ಆಟಗಾರರಾದ ಕೇನ್ ವಿಲಿಯಮ್ಸನ್, ಸೌಥಿ, ಬೋಲ್ಟ್ ಅಲಭ್ಯರಾಗಿದ್ದಾರೆ. ಇತ್ತೀಚೆಗೆ ಪಾಕಿಸ್ಥಾನ ವಿರುದ್ಧ ಆಡಿದ ನ್ಯೂಜಿಲ್ಯಾಂಡ್ ತಂಡ ನೇರವಾಗಿ ಇಲ್ಲಿಗೆ ಆಗಮಿಸಿದೆ. ಆರಂಭಿಕ ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟಾಮ್ ಲ್ಯಾಥಮ್ ತಂಡ ಮುನ್ನಡೆಸಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಗ್ಲೆನ್ ಫಿಲಿಪ್ಸ್ ಅಮೋಘವಾಗಿ ಆಡಿದ್ದರು. ಅವರನ್ನು ಕಟ್ಟಿಹಾಕುವುದು ಆತಿಥೇಯ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲಾಗಿದೆ. ವೇಗಿಗಳಾದ ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್ ಅವರು ಭಾರತ ತಂಡದ ಆಟಗಾರರನ್ನು ಕಟ್ಟಿಹಾಕುವ ಉತ್ಸಾಹದಲ್ಲಿದ್ದಾರೆ.
ನಾವು ಮೊದಲು ಬ್ಯಾಟ್ ಮಾಡುತ್ತೇವೆ. ಮೈದಾನ ಸ್ವಲ್ಪ ಒಣಗಿದ ರೀತಿಯಲ್ಲಿ ಕಾಣುತ್ತಿದೆ. ಸಂಜೆ ಬೌಲಿಂಗ್ ಮಾಡಲು ಇದು ತುಂಬಾ ಅನುಕೂಲ. ಅಲ್ಲದೇ ಎದುರಾಳಿ ತಂಡದ ಆಟಗಾರರನ್ನು ಬಹುಬೇಗ ಕಟ್ಟಿಹಾಕಬಹುದು. ಈಗಾಗಲೇ ನಾವು ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ, ಇಂದಿನ ಪಂದ್ಯ ವಿಭಿನ್ನ. ಅದಕ್ಕೂ ಇದಕ್ಕೂ ಹೋಲಿಕೆ ಅಸಾಧ್ಯ. ಆದರೂ ಸವಾಲು ಎದುರಿಸಲು ಸಿದ್ಧರಿದ್ದೇವೆ. ಅದೇ ವೇಗವನ್ನು ಮುಂದುವರಿಸುವುದು ಸನ್ನದ್ಧರಾಗಿದ್ದೇವೆ. ತಂಡದ ಆಟಗಾರರಲ್ಲಿ ಗೆಲ್ಲುವ ಉತ್ಸಾಹವಿದೆ. ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಮರಳಿ ಗೂಡಿಗೆ ಬಂದಿದ್ದು ತಂಡಕ್ಕೆ ಬಲ ಬಂದಿದೆ. ಇಶಾನ್ ಕಿಶನ್ ಕೂಡ ಆಡಲಿದ್ದಾರೆ. -ರೋಹಿತ್ ಶರ್ಮಾ, ಟೀಂ ಇಂಡಿಯಾದ ನಾಯಕ
ಮೈದಾನದಲ್ಲಿ ಉತ್ತಮ ವಾತಾವರಣ ಇರುವುದರಿಂದ ನಾವು ಮೊದಲು ಬೌಲಿಂಗ್ ಮಾಡಲು ಆಲೋಚನೆ ಮಾಡಿದ್ದೆವು. ಭಾರತೀಯ ಆಟಗಾರರನ್ನು ಬಹುಬೇಗ ಕಟ್ಟಿಹಾಕುವುದು ನಮಗೆ ಸವಾಲು. ಪಾಕಿಸ್ತಾನದ ವಿರುದ್ಧದ ಸರಣಿಯ ಬಳಿಕ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ಆದರೆ, ಇದು ಹೊಸಬರಿಗೆ ಉತ್ತಮ ಅವಕಾಶ. ತಂಡದ ಪ್ರಾಯಶಃ ಎಲ್ಲ ಆಟಗಾರರು ಅನುಭವಿಗಳಾಗಿದ್ದಾರೆ. ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳಿದ್ದಾರೆ. ಪ್ರಮುಖ ಆಟಗಾರರಾದ ಕೇನ್ ವಿಲಿಯಮ್ಸನ್, ಸೌಥಿ, ಬೋಲ್ಟ್ ಅಲಭ್ಯರಾಗಿದ್ದಾರೆ. - ಟಾಮ್ ಲ್ಯಾಥಮ್, ನ್ಯೂಜಿಲ್ಯಾಂಡ್ ನಾಯಕ
ಉಳಿದ ಪಂದ್ಯ:ಮೂರು ಏಕದಿನ ಸರಣಿಯಲ್ಲಿ ಇಂದು ಮೊದಲ ಪಂದ್ಯ ನಡೆಯುತ್ತಿದೆ.ಎರಡನೇ ಏಕದಿನ ಪಂದ್ಯವು ಜನವರಿ 21 ನಡೆಯಲಿದ್ದು ನಯಾ ರಾಯ್ಪುರ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿಕೊಳ್ಳಲಿದೆ. ಮೂರನೇ ಏಕದಿನ ಪಂದ್ಯವು ಜನವರಿ 24 ನಡೆಯಲಿದ್ದು ಇಂದೂರ್ನ ಹೋಳ್ಕರ್ ಮೈದಾನ ಆತಿಥ್ಯ ವಹಿಸಿಕೊಳ್ಳಲಿದೆ.
ಭಾರತ ತಂಡ ಹೀಗಿದೆ:ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ.
ನ್ಯೂಜಿಲ್ಯಾಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ+ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್ ಹಾಗೂ ಬ್ಲೇರ್ ಟಿಕ್ನರ್.