ಅಡಿಲೇಡ್(ಆಸ್ಟ್ರೇಲಿಯಾ):ನ್ಯೂಜಿಲ್ಯಾಂಡ್ ಸೋಲಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿರುವ ಪಾಕಿಸ್ತಾನದ ಎದುರು ಸೆಣಸಾಡಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಅಡಿಲೇಡ್ನ ಓವಲ್ ಮೈದಾನದಲ್ಲಿಂದು ಮಧ್ಯಾಹ್ನ ಎದುರಾಗಲಿವೆ. ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ತಂಡವಾಗಿ ಫೈನಲ್ ತಲುಪಿ ಪಾಕ್ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.
ಗ್ರೂಪ್ 1 ಅಗ್ರಸ್ಥಾನಿಯಾಗಿ ಸೆಮಿಫೈನಲ್ ತಲುಪಿರುವ ಭಾರತ ಗ್ರೂಪ್ 2 ರ ದ್ವಿತೀಯ ಸ್ಥಾನಿ ಇಂಗ್ಲೆಂಡ್ ವಿರುದ್ಧ ಓವಲ್ನಲ್ಲಿ 2 ಸೆಮಿಫೈನಲ್ ನಡೆಯಲಿದೆ. ಗೆಲ್ಲುವ ಉತ್ಸಾಹದಲ್ಲಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈಗಾಗಲೇ ನಾವು ಇಂಗ್ಲೆಂಡ್ ವಿರುದ್ಧ ಗೆದ್ದಿದ್ದೇವೆ ಎಂದಿದ್ದಾರೆ.
ತಂಡಗಳ ಗೆಲುವು, ಸೋಲಿನ ಲೆಕ್ಕ:ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 22 ಟಿ 20 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ ತಂಡ 12 ಪಂದ್ಯಗಳಲ್ಲಿ ಗೆದ್ದಿದೆ. 10 ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ಗೆ ಭಾರತಕ್ಕೆ ಟಕ್ಕರ್ ನೀಡುವುದು ಖಂಡಿತ. ಉಭಯ ತಂಡಗಳು 2007, 2009 ಮತ್ತು 2012 ರ ವಿಶ್ವಕಪ್ನಲ್ಲಿ 3 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಟೀಮ್ ಇಂಡಿಯಾ 2 ಬಾರಿ ಗೆದ್ದರೆ, ಇಂಗ್ಲೆಂಡ್ 1 ಪಂದ್ಯದಲ್ಲಿ ಜಯ ಸಾಧಿಸಿದೆ.
ಅಡಿಲೇಡ್ನಲ್ಲಿ ಸೋತಿಲ್ಲ ಭಾರತ:ಭಾರತ ತಂಡ ಅಡಿಲೇಡ್ನ ಓವಲ್ ಮೈದಾನದಲ್ಲಿ ಆಡಿರುವ 2 ಪಂದ್ಯಗಳಲ್ಲಿ ಗೆದ್ದಿದೆ. ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶಕ್ಕೆ ಸೋಲುಣಿಸಿವೆ. ಈ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಎದುರಾಗಿರುವ ಉಭಯ ತಂಡಗಳಿಗೆ ಅಡಿಲೇಡ್ ಮೈದಾನ ಯಾರಿಗೆ ವರವಾಗಲಿದೆ ಎಂಬುದು ಗೊತ್ತಾಗಲಿದೆ.
ವಿರಾಟ್ ಕೊಹ್ಲಿ ಫೇವರಿಟ್ ಮೈದಾನ:ವಿಶ್ವಕಪ್ನಲ್ಲಿ ಭರ್ಜರಿ ಬ್ಯಾಟ್ ಮಾಡುತ್ತಿರುವ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಗೆ ಇದು ಫೇವರಿಟ್ ಮೈದಾನವಾಗಿದೆ. ಆಡಿರುವ 2 ಟಿ20 ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಡೇವಿಡ್ ವಾರ್ನರ್ ಔಟಾಗದೇ 90 ರನ್ ಗಳಿಸಿದ್ದು ಆಟಗಾರನೊಬ್ಬ ದಾಖಲಿಸಿದ ಅತ್ಯಧಿಕ ರನ್ ಆಗಿದೆ. ವಿರಾಟ್ ಕೊಹ್ಲಿ 64 ಗಳಿಸಿದ್ದು ಎರಡನೇ ದೊಡ್ಡ ಮೊತ್ತವಾಗಿದೆ. ಇನ್ನು ವಿಶೇಷ ಅಂದ್ರೆ ಇಂಗ್ಲೆಂಡ್ನ ಈಗಿನ ಯಾವೊಬ್ಬ ಆಟಗಾರನೂ ಅಡಿಲೇಡ್ನಲ್ಲಿ ಪಂದ್ಯವನ್ನೇ ಆಡಿಲ್ಲ.
ಭಾರತಕ್ಕೆ ಬ್ಯಾಟಿಂಗ್ ಭಯ:ಭಾರತ ತಂಡದ ಬಲವೇ ಬ್ಯಾಟಿಂಗ್ ವಿಭಾಗ. ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ ಬ್ಯಾಟ್ ಝಳಪಿಸುತ್ತಿದ್ದಾರೆ. ಅದರಲ್ಲೂ ವಿರಾಟ್ ಈ ವಿಶ್ವಕಪ್ನಲ್ಲಿ ಆಡಿದ 5 ಪಂದ್ಯಗಳಲ್ಲಿ 3 ಬಾರಿ ಅಜೇಯರಾಗಿ ಉಳಿದಿದ್ದಾರೆ. ಇಂಗ್ಲೆಂಡ್ ಪಂದ್ಯದಲ್ಲಿ ವಿರಾಟ್ರೂಪ ದರ್ಶನವಾದರೆ ಫೈನಲ್ ಟಿಕೆಟ್ ಖಾತ್ರಿಯೇ ಸರಿ. ಬೌಲಿಂಗ್ನಲ್ಲಿ ಯುವವೇಗಿ ಅರ್ಷದೀಪ್ ಸಿಂಗ್ ಮಿಂಚುತ್ತಿದ್ದರೆ, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ಸ್ಪಿನ್ನರ್ ಅಶ್ವಿನ್ ಲಯದಲ್ಲಿದ್ದಾರೆ.
ಇಂಗ್ಲೆಂಡ್ಗೆ ಸ್ಥಿರ ಬ್ಯಾಟಿಂಗ್ ಚಿಂತೆ:ಬ್ಯಾಟರ್ ಡೇವಿಡ್ ಮಲಾನ್, ಬೌಲರ್ ಮಾರ್ಕ್ವುಡ್ ಗಾಯಗೊಂಡಿದ್ದು ತಂಡದ ಚಿಂತೆ ಹೆಚ್ಚಿಸಿದೆ. ಅಲ್ಲದೇ, ಬ್ಯಾಟರ್ಗಳು ಸ್ಥಿರ ಪ್ರದರ್ಶನ ನೀಡದೇ ಇರುವುದು ಕೂಡ ಮೈನಸ್ ಆಗಿದೆ. ಡ್ಯಾಶಿಂಗ್ ಬ್ಯಾಟರ್ ಅಲೆಕ್ಸ್ ಹೇಲ್ಸ್, ನಾಯಕ ಜೋಸ್ ಬಟ್ಲರ್, ಆಲ್ರೌಂಡರ್ಗಳಾದ ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ಸ್ಟೋನ್, ಮೊಯಿನ್ ಅಲಿ ಸಿಡಿಯಬೇಕಿದೆ. ಬೌಲಿಂಗ್ನಲ್ಲಿ ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಡೇವಿಡ್ ವಿಲ್ಲೆ ವಿಕೆಟ್ ಉದುರಿಸಬೇಕಿದೆ.
ಓದಿ:ಕ್ರಿಕೆಟ್ನಿಂದ ನಿವೃತ್ತಿಯಾದರೂ ಧೋನಿ ಆದಾಯ ಹೆಚ್ಚು: ಆರು ತಿಂಗಳಲ್ಲಿ ಕಟ್ಟಿದ ತೆರಿಗೆ ಎಷ್ಟು?