ಬರ್ಮಿಂಗ್ಹ್ಯಾಮ್:ಕಳೆದ ವರ್ಷದ ಭಾರತ - ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೋವಿಡ್ನಿಂದ ಅಂತಿಮ ಪಂದ್ಯವು ಕೊನೆಗಳಿಗೆಯಲ್ಲಿ ರದ್ದಾಗಿತ್ತು. ಬಳಿಕ ಮರು ನಿಗದಿಪಡಿಸಲಾಗಿದ್ದ ಕೊನೆಯ ಪಂದ್ಯವು ಇಂದಿನಿಂದ ಇಲ್ಲಿನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ. ಭಾರತ ಈಗಾಗಲೇ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವುದರಿಂದ ಈ ಪಂದ್ಯವು ನಿರ್ಣಾಯಕವಾಗಿದೆ.
ವಿಶೇಷವೆಂದರೆ ಎರಡೂ ತಂಡಗಳ ನಾಯಕರೂ ಕೂಡ ಈಗ ಬದಲಾಗಿದ್ದಾರೆ. ಹಾಗೆಯೇ ಆಗ ಸರಣಿಯಲ್ಲಿದ್ದ ಕೆಲವರು ಸದ್ಯ ತಂಡದಲ್ಲಿಲ್ಲ. ಕಳೆದ ವರ್ಷ ಆಡಿದ ನಾಲ್ಕು ಟೆಸ್ಟ್‌ಗಳಲ್ಲಿ ಭಾರತ ಎರಡರಲ್ಲಿ ಗೆದ್ದು, ಒಂದರಲ್ಲಿ ಸೋತಿದೆ. ಇನ್ನೊಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. 2-1ರ ಮುನ್ನಡೆ ಸಾಧಿಸಿ ಕೊನೆಯ ಟೆಸ್ಟ್ ಗೆದ್ದು ಐತಿಹಾಸಿಕ ಸರಣಿ ಗೆಲ್ಲಬೇಕು ಎಂದುಕೊಂಡಿದ್ದಾಗ ಕೊರೊನಾ ವೈರಸ್ ಸರಣಿಯನ್ನೇ ಸ್ಥಗಿತಗೊಳಿಸಿತ್ತು.
ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ಸರಣಿ ಸಮಬಲವಾಗಲಿದೆ. ಭಾರತ ಗೆಲುವು ಕಂಡರೆ ಅಥವಾ ಡ್ರಾ ಮಾಡಿಕೊಂಡರೂ ಐತಿಹಾಸಿಕ ಸರಣಿ ಜಯ ಸಾಧಿಸಲಿದೆ. 2007ರ ನಂತರ, ಇಂಗ್ಲೆಂಡ್ ನೆಲದಲ್ಲಿ ದ್ವಿಪಕ್ಷೀಯ ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಟೀಂ ಇಂಡಿಯಾಕ್ಕೆ ಇದೆ.
ಕಳೆದ ವರ್ಷದ ಸರಣಿಯಲ್ಲಿ ಇಂಗ್ಲೆಂಡ್ ಟೆಸ್ಟ್ ನಾಯಕರಾಗಿ ಜೋ ರೂಟ್, ಕೋಚ್ ಸಿಲ್ವರ್ ವುಡ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಕೋಚ್ ಆಗಿದ್ದರು. ಆದರೀಗ ಬೆನ್ ಸ್ಟೋಕ್ಸ್ ಪ್ರಸ್ತುತ ಇಂಗ್ಲೆಂಡ್ ನಾಯಕರಾಗಿದ್ದು, ಬ್ರೆಂಡನ್ ಮೆಕಲಮ್ ಕೋಚ್ ಆಗಿದ್ದಾರೆ. ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರೆ, ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಮುಂದಾಳತ್ವ ವಹಿಸಿದ್ದಾರೆ.