ಬರ್ಮಿಂಗ್ಹ್ಯಾಮ್:ಟಿ-20 ಸರಣಿಯಲ್ಲಿ ಇಂಗ್ಲೆಂಡ್ ಗೆಲುವಿನ ಮೂಲಕ ಶುಭಾರಂಭ ಮಾಡಿರುವ ರೋಹಿತ್ ಶರ್ಮಾ ಪಡೆ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂದು ಎರಡನೇ ಪಂದ್ಯವನ್ನಾಡಲಿದೆ. ಸದ್ಯ ಫಾರ್ಮ್ ಕಳೆದುಕೊಂಡಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಐದು ತಿಂಗಳ ನಂತರ ಟಿ-20 ಪಂದ್ಯ ಆಡಲಿದ್ದಾರೆ.
ಸೌತಾಂಪ್ಟನ್ನಲ್ಲಿ ನಡೆದ ಮೊದಲ ಹಣಾಹಣಿಯಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದ ಭಾರತ 50 ರನ್ ಅಂತರದಿಂದ ಬಟ್ಲರ್ ಪಡೆಯನ್ನು ಸೋಲಿಸಿ 1-0 ಮುನ್ನಡೆ ಸಾಧಿಸಿದೆ. ಆದರೆ ಇಂದಿನ ಪಂದ್ಯದಲ್ಲಿ ಕೆಲ ಬದಲಾವಣೆಗಳಾಗಲಿದ್ದು, ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಮೊದಲ ಪಂದ್ಯವನ್ನಾಡಿದ ಕೆಲವರು ಇಂದು ಬೆಂಚ್ ಕಾಯಬೇಕಾಗಲಿದೆ.
ಕೊಹ್ಲಿ ಮತ್ತು ಇತರರಿಗೆ ಮೊದಲ ಪಂದ್ಯಕ್ಕೆ ವಿಶ್ರಾಂತಿ ಮತ್ತು ರೊಟೇಷನ್ ನೀತಿಯಂತೆ ಅವಕಾಶ ಪಡೆದ ದೀಪಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಪಂದ್ಯದಲ್ಲಿ 17 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಅವರನ್ನು ಇಂದು ಕೈಬಿಡುವುದು ಕಷ್ಟವಾಗಿದೆ. ಹೂಡಾ ಅವರನ್ನು ಉಳಿಸಿಕೊಂಡರೆ, ಇಶಾನ್ ಕಿಶನ್ ಸ್ಥಾನದಲ್ಲಿ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಓಪನಿಂಗ್ ಕ್ರಮಾಂಕದಲ್ಲಿ ವಿರಾಟ್ ಈಗಾಗಲೇ ಆಡಿರುವ ಅನುಭವ ಹೊಂದಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ (19 ಎಸೆತಗಳಲ್ಲಿ 39 ರನ್) ತೋರಿದ್ದು, ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಟದ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್ನಲ್ಲಿ ಅರ್ಧಶತಕ ಬಾರಿಸಿದ್ದ ಹಾರ್ದಿಕ್, 33 ರನ್ಗೆ 4 ವಿಕೆಟ್ ಕಿತ್ತಿದ್ದರು. ಇನ್ನೊಂದೆಡೆ ಟಿ-20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆಯಿದೆ.