ಪುಣೆ (ಮಹಾರಾಷ್ಟ್ರ): ಇಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬಿಗಿ ಬೌಲಿಂಗ್ ದಾಳಿಯ ಬಳಿಕವೂ ಬಾಂಗ್ಲಾದೇಶ ಉತ್ತಮ ರನ್ ಕಲೆ ಹಾಕಿದೆ. ತಂಡದ ಆರಂಭಿಕ ಆಟಗಾರರಾದ ಲಿಟ್ಟನ್ ದಾಸ್ ಮತ್ತು ತಂಜಿದ್ ಹಸನ್ ಅವರ ಅರ್ಧ ಶತಕದ ನೆರವನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಬಾಂಗ್ಲಾ 256 ರನ್ ಕಲೆ ಹಾಕಿತು. ಭಾರತದ ಗೆಲುವಿಗೆ 257 ರನ್ ಬೇಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಆಟಗಾರರು, ಆರಂಭದಲ್ಲಿ ದಿಟ್ಟ ಉತ್ತರ ನೀಡುವ ಮೂಲಕ ಭಾರತದ ಬೌಲರ್ಗಳನ್ನು ಸ್ವಲ್ಪ ಹೊತ್ತು ಕಾಡಿದರು. ಮೊದಲು ಕ್ರೀಸ್ಗಿಳಿದ ಲಿಟ್ಟನ್ ದಾಸ್ ಮತ್ತು ತಂಜಿದ್ ಹಸನ್ ತಂಡದ ನಿರೀಕ್ಷೆ ಹುಸಿಗೊಳಿಸಲಿಲ್ಲ. ಅರ್ಧ ಶತಕ ಸಿಡಿಸಿದ ಈ ಜೋಡಿ ತಂಡದ ಮೊತ್ತವನ್ನು ಗರಿಷ್ಠ ಮಟ್ಟಕ್ಕೆ ತಂದು ನಿಲ್ಲಿಸಿದರು. 43 ಎಸೆತಗಳನ್ನು ಎದುರಿಸಿದ ತಂಜಿದ್ ಹಸನ್ 3 ಸಿಕ್ಸ್ ಹಾಗೂ 5 ಬೌಂಡರಿಸಹಿತ 51 ರನ್ ಗಳಿಸಿದರೆ, 82 ಎಸೆತಗಳನ್ನು ಆಡಿದ ಜತೆಗಾರ ಲಿಟ್ಟನ್ ದಾಸ್ 7 ಆಕರ್ಷಕ ಬೌಂಡರಿಗಳೊಂದಿಗೆ 66 ರನ್ ಗಳಿಸಿ ಇನ್ನಿಂಗ್ಸ್ನ ಹೀರೋ ಆದರು.
ತಂಡದ 93 ರನ್ ಆದಾಗ ಕುಲದೀಪ್ ಯಾದವ್ ಬೌಲಿಂಗ್ಗೆ ತಂಜಿದ್ ಮೊದಲ ಬಲಿಯಾದರು. ಬಳಿಕ ಬಂದ ಹಂಗಾಮಿ ನಾಯಕ ನಜ್ಮುಲ್ ಹೊಸೈನ್ ಶಾಂಟೋ ಕೇವಲ 8 ರನ್ಗಳಿಸಿ ಬಾಂಗ್ಲಾ ಕ್ರೀಡಾಭಿಮಾನಿಗಳ ಭರವಸೆ ಹುಸಿಗೊಳಿಸಿದರು. ಮೆಹಿದಿ ಹಸನ್ ಮಿರಾಜ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅರ್ಧ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದ್ದ ಲಿಟ್ಟನ್ ದಾಸ್ ತಂಡದ ಮೊತ್ತ 137 ರನ್ ಆದಾಗ ರವೀಂದ್ರ ಜಡೇಜಾಗೆ ಬಲಿಯಾದರು. ಅವರ ಬಳಿಕ ಕಣಕ್ಕಿಳಿದ ತೌಹಿದ್ ಹೃದೊಯ್ 16, ವಿಕೆಟ್ ಕೀಪರ್ ಮುಶ್ಫಿಖರ್ ರಹೀಮ್ 38, ನಸುಮ್ ಅಹ್ಮದ್ 14 ರನ್ ಗಳಿಸಿ ತಮ್ಮ ಕಾಣಿಕೆ ನೀಡಿದರು. 36 ಎಸೆತಗಳನ್ನು ಎದುರಿಸಿದ ಮಹಮ್ಮದುಲ್ಲಾ 3 ಸಿಕ್ಸ್ ಹಾಗೂ 3 ಬೌಂಡರಿಗಳ ಸಹಿತ 46 ರನ್ ಗಳಿಸಿ ಕೊನೆ ಗಳಿಗೆಯಲ್ಲಿ ತಂಡಕ್ಕೆ ದೊಡ್ಡ ವರದಾನವಾದರು. ಅರ್ಧ ಶತಕಕ್ಕೆ ಕೇವಲ 4 ರನ್ಗಳು ಬಾಕಿ ಇದ್ದಾಗ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಔಟಾಗದೇ ಮುಸ್ತಫಿಜುರ್ ರಹಮಾನ್ 01, ಶೋರಿಫುಲ್ ಇಸ್ಲಾಂ 7 ರನ್ ಗಳಿಸಿ ತಂಡದ ಮೊತ್ತವನ್ನು 256ರ ಗಡಿಗೆ ತಂದರು.