ಮೊಹಾಲಿ (ಪಂಜಾಬ್): ವಿಶ್ವಕಪ್ ತಯಾರಿ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಶಮಿ ಐದು ವಿಕೆಟ್ ಪಡೆದು ಮಿಂಚಿದರೆ, ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದರು. ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಕೆ.ಎಲ್ ರಾಹುಲ್ ಅವರ ಅರ್ಧಶತಕದ ಬ್ಯಾಟಿಂಗ್ ಬಲ ಕಾಂಗರೂ ಪಡೆ ಕೊಟ್ಟಿದ್ದ 277 ರನ್ ಗುರಿಯನ್ನು ಸುಲಭವಾಗಿ ಮೆಟ್ಟಿ ನಿಂತಿತು. ಈ ಮೂಲಕ ಭಾರತ ಏಕದಿನ ರ್ಯಾಂಕಿಂಗ್ನಲ್ಲಿ ನಂ.1 ತಂಡದ ಸ್ಥಾನವನ್ನು ಅಲಂಕರಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋಲು ಕಂಡು ಭಾರತಕ್ಕೆ ಬಂದಿದ್ದ ಕಾಂಗರೂ ಪಡೆಗೆ ಮೊದಲ ಸೋಲು ಎದುರಾಗಿದೆ. ಟೀಂ ಇಂಡಿಯಾ 8 ಬಾಲ್ ಮತ್ತು 5 ವಿಕಟ್ ಉಳಿಸಿಕೊಂಡು ಪಂದ್ಯವನ್ನು ಗೆದ್ದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವಾರ್ನರ್, ಸ್ಮಿತ್ ಮತ್ತು ಇಂಗ್ಲಿಸ್ ಅವರ ಬ್ಯಾಟಿಂಗ್ ಬಲದಿಂದ 276 ರನ್ ಕಲೆಹಾಕಿತ್ತು. ಇದನ್ನು ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿತು. ಗಿಲ್ ಮತ್ತು ಗಾಯಕ್ವಾಡ್ ಜೋಡಿ ಭರ್ಜರಿ ಆರಂಭ ನೀಡಿತು. ಏಷ್ಯನ್ ಗೇಮ್ಸ್ನ ನಾಯಕರಾಗಿರುವ ರುತುರಾಜ್ ಭಾರತದ ಪರ ತಮ್ಮ 3ನೇ ಏಕದಿನ ಇನ್ನಿಂಗ್ಸ್ ಆಡುತ್ತಿದ್ದರೂ ಅನುಭವಿ ಆಟಗಾರರಂತೆ ಮೈದಾನದ ತುಂಬಾ ರನ್ ಹರಿಸಿದರು.
ಇಬ್ಬರು ಬ್ಯಾಟರ್ಗಳು ಅರ್ಧಶತಕವನ್ನು ಪೂರೈಸಿಕೊಂಡು 16ನೇ ಓವರ್ಗೆ ಶತಕದ ಜೊತೆಯಾಟ ಮಾಡಿದರು. ಅರ್ಧಶತ ಗಳಿಸಿ ಶತಕದತ್ತ ಮುನ್ನಡೆಯುತ್ತಿದ್ದಾಗ ಆಸಿಸ್ ಸ್ಪಿನ್ ಬೌಲರ್ ಆಡಮ್ ಝಂಪಾ ಎಸೆತದಲ್ಲಿ ಗಾಯಕ್ವಾಡ್ ಎಲ್ಬಿಡಬ್ಯೂ ಬಲೆಗೆ ಬಿದ್ದರು. 77 ಬಾಲ್ ಎದುರಿಸಿದ ಅವರು 10 ಬೌಂಡರಿಗಳ ಸಹಾಯದಿಂದ 71 ರನ್ ಕಲೆಹಾಕಿದರು. ಗಾಯಕ್ವಾಡ್ ನಂತರ ಬಂದ ಶ್ರೇಯಸ್ ಅಯ್ಯರ್ ರನ್ಔಟ್ಗೆ ಬಲಿಯಾದರು. ಈ ಎರಡು ವಿಕೆಟ್ ಬೆನ್ನಲ್ಲೇ 63 ಬಾಲ್ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸ್ನಿಂದ 74 ರನ್ ಗಳಿಸಿ ಆಡುತ್ತಿದ್ದ ಗಿಲ್ ಸಹ ಆಡಮ್ ಝಂಪಾ ಬಾಲ್ಗೆ ಕ್ಲೀನ್ ಬೌಲ್ಡ್ ಆದರು.